ಹೊಸದಿಗಂತ ವರದಿ,ಹಾಸನ :
ಪಕ್ಷ ಹೊಂದಾಣಿಕೆ ಎನ್ನುವುದು ಮೊದಲಿಂದಲೂ ರಾಜಕಾರಣದಲ್ಲಿ ಇರುವ ಪ್ರಕ್ರಿಯೆಯಾಗಿದ್ದು, ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ ತಕ್ಷಣ ಜಾತ್ಯಾತೀತ ತತ್ವ ಬದಲಾವಣೆ ಆಗಲ್ಲ ಎಂದು ಮಾಜಿ ಸಚಿವ ಹಾಗೂ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಮಕೃಷ್ಣ ಹೆಗ್ಡೆ, ಬಂಗಾರಪ್ಪ ಅವರು ಇದ್ದಾಗ ಬಿಜೆಪಿ ಜೊತೆ ಜನತಾದಳ ಹೊಂದಾಣಿಕೆ ಆಗಿರಲಿಲ್ವಾ ಈಗ ಯಾಕೆ ಅದರ ಬಗ್ಗೆ ಮಾತನಾಡುತ್ತಾರೆ . ಹೊಂದಾಣಿಕೆ ಮಾಡಿಕೊಳ್ಳುವುದು ಆ ಪಕ್ಷದ ಸಂಘಟನೆ, ಆ ಪಕ್ಷದ ಶಕ್ತಿಯನ್ನು ಹೆಚ್ಚಿಗೆ ಮಾಡಿಕೊಳ್ಳುವ ಉದ್ದೇಶವಾಗಿದೆ ಎಂದರು.
ಉದಾಹರಣೆ ನೀಡುತ್ತಾ ಹೇಳಿದ ಮಂಜು, ಈಗ ನಾನೇ ಅಂತರ್ಜಾತಿ ವಿವಾಹ ಆಗಿದ್ದೇನೆ ಎಂದು ಇಟ್ಟುಕೊಳ್ಳಿ, ಅಷ್ಟಕ್ಕೆ ನಾನೇನು ಚೇಂಜ್ ಆಗಿದ್ದೀನಾ, ನನ್ನ ಇನ್ಸಿಲ್ ಚೇಂಜ್ ಆಗುತ್ತಾ, ಅದಕ್ಕೂ, ಇದಕ್ಕೂ ಸಂಬಂಧವಿಲ್ಲ, ನಮ್ಮ ದೇಶದ ದೃಷ್ಟಿಯಿಂದ, ಮುಂದಿನ ದೇಶದ ಹಿತಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ, ಇದರಲ್ಲಿ ತಪ್ಪೇನು ಇಲ್ಲ ಎಂಬುವುದು ನನ್ನ ಅಭಿಪ್ರಾಯ ಎಂದರು.
ಸಿಎಂ ಇಬ್ರಾಹಿಂ ಅವರು ಎನ್‌ಡಿಎ ಜೊತೆ ಜೆಡಿಎಸ್ ಪಕ್ಷ ಹೋಗುವುದು ಇಷ್ಟ ಇಲ್ಲಾ ಎಂದು ಹೇಳಿದಾಗ, ಅವರ ಬದಲು ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಪಕ್ಷದ ಜವಾಬ್ದಾರಿಯಾಗಿದೆ. ಹೀಗಾಗಿ ಪಕ್ಷದ ಜವಾಬ್ದಾರಿ ಮೇಲೆ ಕುಮಾರಸ್ವಾಮಿ ಅವರನ್ನು ನೇಮಿಸಿಕೊಂಡಿದ್ದೇವೆ, ಅದರಲ್ಲಿ ತಪ್ಪೇನು ಇಲ್ಲ ಎಂದರು.
ಕೆಲವರದ್ದು ವೈಯುಕ್ತಿಕ ನಿರ್ಧಾರ ಇರುತ್ತದೆ. ಇನ್ನೂ ಇಬ್ರಾಹಿಂ ಅವರು ಒರಿಜಿನಲ್ ಜೆಡಿಎಸ್ ನಮ್ದು ಎಂಬ ಹೇಳಿಕೆ ಯಾಕೆ ನೀಡಿದ್ದಾರೆ ಅನ್ನೋದನ್ನ ಅವರೇ ಹೇಳಬೇಕು ಹಾಗೂ ಜೆಡಿಎಸ್‌ನಿಂದ ಅವರನ್ನು ಉಚ್ಛಾಟನೆ ಮಾಡಿ ನೂತನ ಅಧ್ಯಕ್ಷರ ಆಯ್ಕೆ ಮಾಡಿರುವುದು ಪಕ್ಷದ ಎಲ್ಲರ ತೀರ್ಮಾನವಾಗಿದೆ ಎಂದು ಹೇಳಿದರು.
ಹಲವಾರು ಮೀಟಿಂಗ್‌ಗಳು ಆಗಿವೆ, ಎಲ್ಲಾ ಮೀಟಿಂಗ್‌ಗಳು ಸಿ.ಎಂ.ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದಿವೆ. ಅವರು ಎಲ್ಲಾ ಮೀಟಿಂಗ್‌ಗಳಲ್ಲೂ ಇದ್ದಾರೆ, ಬಿಜೆಪಿ ಜೊತೆ ಹೊಂದಾಣಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿದಾಗ ಆಗ ಅವರು ಏನೂ ಮಾತನಾಡಲಿಲ್ಲ. ಸುಮ್ಮನೆ ಇದ್ದರೆ ಅದು ಒಪ್ಪಿಗೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಅವರು ಆಗ ಸುಮ್ಮನಿದ್ದು, ಈಗ ಹೇಳಿಕೆ ಕೊಡುವುದು ಸರಿಯಲ್ಲ. ಅವರು ಸಭೆಯಲ್ಲೇ ಚರ್ಚೆ ಮಾಡಬೇಕಿತ್ತು ಅವರು ಗೊತ್ತೆ ಇಲ್ಲಾ, ಹೇಳೇ ಇಲ್ಲಾ ಅನ್ನೋದು ಅವರ ವ್ಯಕ್ತಿತ್ವಕ್ಕೆ ಗೌರವ ತರುವುದಿಲ್ಲ ಎಂದರು.
ಇಂದಿನ ರಾಜಕೀಯದಲ್ಲಿ ಯಾರೂ ಶತ್ರುನು ಇಲ್ಲಾ, ಮಿತ್ರನೂ ಅಲ್ಲ, ಈಗ ನಮ್ ಕಣ್ಣ ಮುಂದೆ ಕಾಣ್ತಿರುವುದು ಪಾರ್ಟಿ, ಪರ್ಸನಲ್ ಇಟ್ರೆಸ್ಟ್‌ಗಿಂತ ದೇಶ ಮುಖ್ಯವಾಗಿದೆ. ಆ ದೃಷ್ಠಿಯಲ್ಲಿ ಒಂದಾಗಬೇಕು ಎಂದು ಇಬ್ಬರು ಕೂಡು ಒಪ್ಪಿಕೊಂಡಿರುವುದು ಸ್ವಾಗತಾಹ ಎಂದರು.
ಮಗನಿಗಾಗಿ ನಮ್ಮ ಮನೆ ಹಾಳು ಮಾಡಿದರು ಎಂಬ ಸಿ.ಎಂ.ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಎ.ಮಂಜು ಅವರು, ಅವರು ಮಗನನ್ನು ಅದೇ ಪಾರ್ಟಿಯಲ್ಲಿ ಎಂಎಲ್‌ಎಗೆ ನಿಲ್ಲಿಸಿರಲಿಲ್ಲವೇ ? ಹೇಗೆ ಆ ರೀತಿ ಮಾತನಾಡುತ್ತಾರೆ, ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ಅವರ ಕ್ಯಾಬಿನೆಟ್‌ನಲ್ಲಿ ವಿಮಾನಯಾನ ಖಾತೆ ಸಚಿವರಾಗಿದ್ದರು. ಆಗ ಯಾರ ಮನೆ ಉದ್ಧಾರ ಆಯಿತು ಎಂದು ಹೇಳಲಿ. ಆದರೆ ತಮಗೆ ತೊಂದರೆಯಾದಾಗ ವೈಯುಕ್ತಿಕ ವಿಚಾರ ಮಾತನಾಡುವುದು ಸರಿಯಲ್ಲ ಎಂದರು.
ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಯಿಸಿದ ಮಂಜು ಅವರು, ಕಾಂಗ್ರೆಸ್ ಬಳಿಯೇ ಈಗ ಹೌಸ್‌ಫುಲ್ ಬೋರ್ಡ್ ಬಿದ್ದಿದೆ. ನನ್ನನ್ನು ಯಾಕೆ ಕರೆಯುತ್ತಾರೆ ? ಅಲ್ಲಿಂದ ಹೋಗುವವರನ್ನು ತಡೆ ಹಿಡಿಯಲು ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇನ್ನೂ ನೆನ್ನೆ ನಡೆದ ನೀರಾವರಿ ಸಲಹಾ ಸಮಿತಿ ವಿಚಾರಕ್ಕೆ ರೇವಣ್ಣ ಅವರು ಮೀಟಿಂಗ್ ಬರಲಿಲ್ಲ, ನಾವು ಮೀಟಿಂಗ್‌ನಲ್ಲಿ ನೀರು ಬಿಡಿಸಲು ತೀರ್ಮಾನ ಮಾಡಿದ್ದೇವೆ, ಆರು ದಿನ ಮೊದಲು ಹೈ ಲೆವೆಲ್ ಕೆನಲ್‌ಗೆ ನೀರು ಬಿಡ್ತಾರೆ. ಮಿಕ್ಕಿದ ಕೆನಲ್‌ಗಳಿಗೆ ಆರು ದಿನ ಆದ್ಮೇಲೆ ಬಿಡ್ತಾರೆ. ಈಗಾಗಲೇ ಸರ್ಕಾರ ಕೆರೆ ತುಂಬಿಸಲು ನೀರು ಬಿಡುತ್ತಿರುವುದು ಯಾರು ಕೂಡ ಬೆಳೆ ಬೆಳೆಯಬಾರದು ಎಂದು ಹೇಳಿದೆ. ಮಾರ್ಚ್‌ವರೆಗೂ ಕುಡಿಯುವ ನೀರು ಇಟ್ಕಂಡು ಈಗಿರುವ ನೀರಿನಲ್ಲಿ ಮೂರು ಟಿಎಂಸಿ ನೀರನ್ನು ಕೆರೆ ತುಂಬಿಸಲು ಬಿಡುತ್ತಾರೆ. ಈಗಾಗಲೇ ಹೈಲೆವೆಲ್ ಕೆನಲ್‌ಗೆ ನೀರು ಬಿಟ್ಟಿದ್ದಾರೆ ಎಂದರು.
ಅರಸೀಕೆರೆಗೆ ಸಚಿವರುಗಳು ಭೇಟಿ ನೀಡುತ್ತಿರುವುದಕ್ಕೆ ಗರಂ ಆದ ಶಾಸಕ ಎ.ಮಂಜು, ನೀವು ತಾಲ್ಲೂಕು ಮಂತ್ರಿ ಅಲ್ಲಾ, ಜಿಲ್ಲಾ ಮಂತ್ರಿ, ರಾಜ್ಯಕ್ಕೆ ಮಂತ್ರಿಯಾಗಿದ್ದೀರಿ, ಎಲ್ಲಾ ತಾಲ್ಲೂಕುಗಳಿಗೆ ನೀವು ಬರಬೇಕು ಎಂದು ನಾನು ಜಿಲ್ಲಾ ಮಂತ್ರಿಯಲ್ಲಿ ಮನವಿ ಮಾಡುತ್ತೇನೆ, ನಮ್ಮ ಪಕ್ಷದ ಶಾಸಕರು ಗೆದ್ದಿದ್ದಾರೆ ಎಂದು ಅತಿ ಪ್ರೀತಿ ತೋರಿಸುವುದು ಒಳ್ಳೆಯದಲ್ಲ ಎಂದರು.
ಹಾಸನ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದಿಂದ ದೇವೇಗೌಡರು ನಿಲ್ಲಬೇಕೆಂದು ನಾನು ಈಗಾಗಲೇ ಮೀಟಿಂಗ್‌ನಲ್ಲಿ ಮನವಿ ಮಾಡಿದ್ದೇನೆ. ಇವತ್ತು ಹೇಳುತ್ತಿದ್ದೇನೆ, ಅವರದ್ದು ಇದು ಕೊನೆ ಎಲೆಕ್ಷನ್ ಆಗಲಿದೆ. ಅವರು ಈ ಜಿಲ್ಲೆಯಿಂದಲೇ ನಿಲ್ಲಬೇಕು ಎನ್ನುವುದು ನನ್ನ ಒತ್ತಾಯವಾಗಿದೆ ಎಂದರು.
ಡಿಸಿಎಂ ಡಿಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆ ವಿಚಾರಕ್ಕೆ ಪ್ರತಿಕ್ರಯಿಸಿದ ಎ.ಮಂಜು ಅವರು, ಯಾರು ಯಾರ ಮೇಲೆ ಬೇಕಾದರೂ ಕೇಸ್ ಹಾಕಬಹುದಾಗಿದೆ. ಇದು ಹೊಸ ಕೇಸ್ ಅಲ್ಲ, ಹಳೆ ಪ್ರಕರಣವಾಗಿದೆ. ಆದರೆ ಯಾಕೆ ತನಿಖೆ ಮಾಡ್ತೀರಿ ಎಂದು ಸಿಬಿಐನವರನ್ನು ಕೇಳಲು ಯಾರಿಗೂ ಅಧಿಕಾರ ಇಲ್ಲವಾಗಿದೆ ಎಂದರು.
ಕುಮಾರಸ್ವಾಮಿ ತಿಹಾರ್ ಜೈಲಿಗೆ ಹೋಗ್ತಾರೆ ಅಂದರು, ಅವರೇನು ಜಡ್ಜಾ ? ಎಂದು ಡಿಕೆಶಿ ಅಂದಿದ್ದರು. ಅದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಕೆಲವೊಂದನ್ನು ಅವರವರ ಭಾವನೆಯಲ್ಲಿ ಅವರು ಮಾತನಾಡ್ತಾರೆ , ಆದರೆ ಸಿಬಿಐ ತನಿಖೆ ಮಾಡುವುದರ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದರು.