ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು- ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿಯಾಗಿ ನಡೆಸಿದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಅಂತಾ ರಾಜ್ಯ ಲಷ್ಕರ್-ಎ-ತೈಬಾ ಭಯೋತ್ಪಾದಕ ಘಟಕದ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ, ಪಾಕಿಸ್ತಾನದ ಭಯೋತ್ಪಾದಕ ಉಸ್ಮಾನ್ ಅಲಿಯಾಸ್ ಖುಬೈಬ್ ಸಹಿತ ಐವರ ಬಂಧನವಾಗಿದೆ.
ಎಲ್ಇಟಿ ಜಾಲವನ್ನು ಜಮ್ಮು-ಕಾಶ್ಮೀರ ದಾಟಿ ಇತರ ರಾಜ್ಯಗಳಲ್ಲಿ ವ್ಯಾಪಿಸಲು ಕಾರಣವಾದ ಹುರೇರಾ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಇದೀಗ ಎಲ್ಇಟಿ ಸಂಘಟನೆಯು ಸಕ್ರಿಯವಾಗಿರುವ ಕುರಿತು ಖಚಿತ ಮಾಹಿತಿ ಆಧಾರದಲ್ಲಿ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಹರಿಯಾಣ ಸಹಿತ 19 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಇಬ್ಬರು ಉಗ್ರರು ಹಾಗು ಬೆಂಬಲ ನೀಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ಈ ಮೂವರು ಶ್ರೀನಗರ ನಿವಾಸಿಗಳೂ ಆಗಿದ್ದು, ಮೊಹಮ್ಮದ್ ನಕೀಬ್ ಭಟ್, ಆದಿಲ್ ರಶೀದ್ ಭಟ್ ಮತ್ತು ಗುಲಾಮ್ ಮೊಹಮ್ಮದ್ ಮಿರ್ ಅಲಿಯಾಸ್ ಮಾಮಾ ಎಂದು ಗುರುತಿಸಲಾಗಿದೆ. ಇವರು ಉಗ್ರರಿಗೆ ಆಶ್ರಯ ಮತ್ತು ಆಹಾರ ಸೇರಿದಂತೆ ಲಾಜಿಸ್ಟಿಕಲ್ ಬೆಂಬಲವನ್ನು ಒದಗಿಸುವಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



