ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಆವಂತಿಪೋರಾದಲ್ಲಿ ಪೊಲೀಸರು, ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನದ ನಿಷೇಧಿತ ಲಷ್ಕರ್-ಎ-ತೊಯ್ಬಾದ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ಹತ್ಯೆಯಾದ ಉಗ್ರರಲ್ಲಿ ಪುಲ್ವಾಮಾದ ಮುಖ್ತಾರ್ ಅಹ್ಮದ್ ಭಟ್ ಮತ್ತು ಸಕ್ಲೇನ್ ಮುಷ್ತಾಕ್ ಸೇರಿದ್ದಾರೆ. ಮೂರನೇ ಭಯೋತ್ಪಾದಕನನ್ನು ಪಾಕಿಸ್ತಾನದ ನಿವಾಸಿ ಮುಷ್ಫಿಕ್ ಎಂದು ಗುರುತಿಸಳಾಗಿದೆ.
ಕಾಶ್ಮೀರ ಪೊಲೀಸರ ಪ್ರಕಾರ, ಮೂವರು ಭಯೋತ್ಪಾದಕರು ರಾಷ್ಟ್ರೀಯ ಹೆದ್ದಾರಿಯ ಸುತ್ತಲೂ ದೊಡ್ಡ ಭಯೋತ್ಪಾದಕ ದಾಳಿಯನ್ನು ಯೋಜಿಸುತ್ತಿದ್ದರು ಎನ್ನಲಾಗಿದ್ದು ಉಗ್ರರಿಂದ ಎಕೆ-74 ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ ಮುಖ್ತಾರ್ ಅಹ್ಮದ್ ಭಟ್ ಎಲ್ಇಟಿಗೆ ಸಂಯೋಜಿತವಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಹಾರ್ಡ್‌ಕೋರ್ ಕಮಾಂಡರ್ ಆಗಿದ್ದ. ಪುಲ್ವಾಮಾ ನಿವಾಸಿಯಾಗಿರುವ ಭಟ್ ಏಪ್ರಿಲ್ 18 ರಂದು ತನ್ನ ತಂದೆಯ ಚಿಕ್ಕಮ್ಮನನ್ನು ಭೇಟಿ ಮಾಡುವ ನೆಪದಲ್ಲಿ ಮನೆಯಿಂದ ಹೊರಟು ನಾಪತ್ತೆಯಾಗಿದ್ದ. ನಂತರ, ಟಿಆರ್‌ಎಫ್‌ಗೆ ಸೇರಿಕೊಂಡು ಪುಲ್ವಾಮಾ ಸುತ್ತಮುತ್ತ ಸಕ್ರಿಯನಾಗಿದ್ದ ಎನ್ನಲಾಗಿದೆ. ಅಲ್ಲದೇ ದೇಶದ ವಿರುದ್ಧ ಯುವಕರನ್ನು ಭಯೋತ್ಪಾನೆಯಲ್ಲಿ ತೊಡಗಿಸಿ ರಾಷ್ಟ್ರದ ಭದ್ರತೆಗೆ ಹಾನಿಕಾರಕ ಚಟುವಟಿಕೆಗಳನ್ನು ನಡೆಸಿದ್ದ.
ಪುಲ್ವಾಮಾದ ಕಾಕಪೋರಾ ಬೆಲ್ಟ್‌ನಲ್ಲಿ ಲಷ್ಕರ್-ಎ-ತೊಯ್ಬಾ-ಟಿಆರ್‌ಎಫ್ ಅನ್ನು ಬಲಪಡಿಸುವಲ್ಲಿ ಭಟ್ ಪ್ರಮುಖ ಪಾತ್ರ ವಹಿಸಿದ್ದ. ಆತ ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತರು, ವಲಸೆ ಕಾರ್ಮಿಕರು ಮತ್ತು ರಾಜಕೀಯ ಕಾರ್ಯಕರ್ತರನ್ನು ಬೆದರಿಸುವ ಕೃತ್ಯಗಳಲ್ಲಿ ತೊಡಗಿದ್ದ ಎನ್ನಲಾಗಿದೆ.
ಈ ವರ್ಷ ಮೇ 13 ರಂದು ಪುಲ್ವಾಮಾದ ಗದೂರದಲ್ಲಿರುವ ಆತನ ನಿವಾಸದಲ್ಲಿ ಜೆ & ಕೆ ಪೊಲೀಸ್ ರಿಯಾಜ್ ಅಹ್ಮದ್ ಥೋಕರ್ ಅವರ ಹತ್ಯೆಯಲ್ಲಿ ಮುಖ್ತಾರ್ ಭಟ್ ಭಾಗಿಯಾಗಿದ್ದ. ಪುಲ್ವಾಮಾ ಪಟ್ಟಣದ ಉಗರ್‌ಗುಂಡ್‌ನಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ನಡೆದ ದಾಳಿಯಲ್ಲಿಯೂ ಭಾಗಿಯಾಗಿದ್ದ ಎನ್ನಲಾಗಿದೆ.