ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಸೋಪೊರ್‌ನಲ್ಲಿ ನಡೆದ ಎನ್‌ಕೌಂಟರ್ ವೇಳೆ ಭದ್ರತಾ ಸಿಬ್ಬಂದಿಯು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಹದಿಪೋರಾ ಪ್ರದೇಶದಲ್ಲಿ ಇಬ್ಬರು ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಉಗ್ರರು ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ ಮುನ್ನಡೆ ಸಾಧಿಸಿದ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂಬುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಗ್ರರು ಯಾವ ಸಂಘಟನೆಗೆ ಸೇರಿದವರು ಎಂಬ ಕುರಿತು ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕಾಶ್ಮೀರಕ್ಕೆ ನಾಳೆ ಮೋದಿ ಭೇಟಿ
ಜೂನ್ 21ರ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಜೂನ್ 20ರಂದು ಕಾಶ್ಮೀರಕ್ಕೆ ಆಗಮಿಸಲಿದ್ದು, ಇದಕ್ಕಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಜೂನ್ 21ರಂದು ಶ್ರೀನಗರದ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್‌ನಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.