ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಬ್ಜಿ ಮೂಲಕ ಪರಿಚಯವಾದ ಪ್ರಿಯಕರನಿಗಾಗಿ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿರುವ ಪಾಕಿಸ್ತಾನ ಮೂಲದ ಮಹಿಳೆ ಸೀಮಾ ಹೈದರ್ ನಡೆ ನಿಗೂಢವಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಭಾರತೀಯ ಪೌರತ್ವವನ್ನು ಕೋರಿ ಸೀಮಾ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿರುವ ಅರ್ಜಿಯಲ್ಲಿ, ಸೀಮಾ ಹೈದರ್ ಭಾರತದಲ್ಲಿ ಉಳಿಯಲು ಅನುಮತಿ ಕೋರಿದ್ದಾರೆ.
ದೆಹಲಿ ಸಮೀಪ ಇರುವ ಗ್ರೇಟರ್ ನೋಯ್ಡಾದ ನಿವಾಸಿ ಸಚಿನ್ ಮೀನಾಗಾಗಿ ಪಾಕಿಸ್ತಾನದ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತವನ್ನು ಅಕ್ರಮವಾಗಿ ಪ್ರವೇಶ ಮಾಡಿದ್ದಾಳೆ. ಆಕೆಯ ನಡೆ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಸೀಮಾ ಅರ್ಜಿ ಸಲ್ಲಿಸಿದ್ದಾಳೆ.
ಏನಿದು ಪ್ರಕರಣ?
30 ವರ್ಷದ ಸೀಮಾ ಮತ್ತು 22 ವರ್ಷದ ಸಚಿನ್ ಮೀನಾ 2019ರಲ್ಲಿ ಕರೊನಾ ಸಂದರ್ಭದಲ್ಲಿ ಆನ್ಲೈನ್ ಗೇಮ್ ಪಬ್ಜಿ ಮುಖಾಂತರ ಪರಿಚಯವಾಗಿದ್ದಾಗಿ ಮತ್ತು ಈ ವರ್ಷದಲ್ಲಿ ಮದುವೆ ಆಗಿರುವುದಾಗಿ ಹೇಳಿದ್ದಾರೆ.
ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದ ಮೇಲೆ ಸೀಮಾಳನ್ನು ಮತ್ತು ಆಕೆಗೆ ಆಶ್ರಯ ಕೊಟ್ಟ ಆರೋಪದ ಮೇಲೆ ಸಚಿನ್ ಮತ್ತು ಆತನ ತಂದೆಯನ್ನು ಜುಲೈ 4ರಂದು ಬಂಧಿಸಲಾಗಿತ್ತು. ಮೂವರಿಗೂ ಜಾಮೀನು ದೊರೆತ ಹಿನ್ನೆಲೆ ಜುಲೈ 7ರಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.