ಹೊಸದಿಗಂತ ವರದಿ,ಕುಶಾಲನಗರ:
ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸೌರಬ್ ಕುಮಾರ್ ಮತ್ತು ತಂಡ, ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಬೇಕಾದ ಸಾಕಾನೆಗಳ ಪರಿಶೀಲನೆ ನಡೆಸಿತು.
ಶಿಬಿರದಲ್ಲಿ ಒಟ್ಟು 22 ಸಾಕಾನೆಗಳಿದ್ದು ಈ ಪೈಕಿ 20 ಗಂಡಾನೆ ಹಾಗೂ ಎರಡು ಹೆಣ್ಣಾನೆಗಳನ್ನು ತಂಡ ಪರಿಶೀಲನೆ ನಡೆಸಿತು.
ಆನೆಗಳಿಗೆ ಸಿಡಿಮದ್ದಿನ ಭಯ ಇದೆಯೇ ಎಂದು ಪರಿಶೀಲಿಸುವ ಸಲುವಾಗಿ ಸಾಕಾನೆಗಳ ಗುಂಪಿನ ಮುಂದೆ ಎರಡು ಮೂರು ಸುತ್ತು ಸಿಡಿಮದ್ದು ಸಿಡಿಸಿ ಧೈರ್ಯ ಪರಿಶೀಲನೆ ನಡೆಸಲಾಯಿತು. ಅಲ್ಲದೆ ದಸರೆಗೆ ಸೂಕ್ತ ಎನಿಸಿದ ದೃಢಕಾಯ ಗಂಡಾನೆಗಳನ್ನು ವೀಕ್ಷಿಸಿ ಮಾಹಿತಿ ಪಡೆಯಲಾಯಿತು.
ಇದರೊಂದಿಗೆ ಕಾವೇರಿ, ವಿಜಯ ಹೆಣ್ಣಾನೆಗಳಿಗೆ ಗರ್ಭಧಾರಣೆ ಆಗಿದೆಯೇ ಎಂದು ಪರಿಶೀಲನೆ ಕೂಡಾ ನಡೆಸಲಾಗಿದ್ದು, ಗರ್ಭಧಾರಣೆ ವರದಿ ಕೆಲ ದಿನಗಳ ನಂತರ ಲಭಿಸಲಿದೆ.
ಹೊಸ ಆನೆಗಳ ಪೈಕಿ ಈಗಾಗಲೇ ದಸಾರದಲ್ಲಿ ಪಾಲ್ಗೊಂಡು ಅನುಭವ ಹೊಂದಿರುವ ಧನಂಜಯ, ಗೋಪಿ, ಹರ್ಷ, ವಿಕ್ರಂ, ವಿಜಯ ಆನೆಗಳು ಶಿಬಿರದಲ್ಲಿವೆ.
ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸೌರಬ್ ಕುಮಾರ್ ತಂಡ ಪರಿಶೀಲನೆ ಕಾರ್ಯ ನಡೆಸಿದ್ದು, ಮುಂದಿನ ಹಂತದಲ್ಲಿ ಆನೆಗಳನ್ನು ಅಂತಿಮಗೊಳಿಸಿ ಗಜಪಯಣಕ್ಕೆ ಆಯ್ಕೆ ಮಾಡಲಿದೆ.