ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಬಿಟ್ಟು ಪಲಾಯನ ಮಾಡಿ ಕೈಲಾಸ ಎಂಬ ದೇಶವನ್ನು ನಿರ್ಮಾಣ ಮಾಡಿ ಅಲ್ಲಿ ತನ್ನ ಶಿಷ್ಯರೊಂದಿಗೆ ವಾಸವಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿಧನರಾಗಿದ್ದಾರೆ ಎಂಬ ವದಂತಿ ಹಬ್ಬಿದೆ.
ನಿತ್ಯಾನಂದರು ಎರಡು ದಿನಗಳ ಹಿಂದೆ ನಿಧನರಾದರು ಎಂಬ ಸುದ್ದಿಯನ್ನು ಆತನ ಸೋದರಳಿಯ ಸುಂದರೇಶ್ವರನ್ ಹೇಳಿಕೊಂಡಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಸಾವಿನ ಸುದ್ದಿಯ ಬಗ್ಗೆ ಇನ್ನೂ ಸ್ಪಷ್ಟತೆ ಲಭ್ಯವಾಗದ ಕಾರಣ ಜನ ಇದೆಲ್ಲಾ ಏಪ್ರಿಲ್ ಫೂಲ್ (April Fool) ದಿನದ ಸಲುವಾಗಿ ಮಾಡಿದ ಪ್ರಚಾರದ ಗಿಮಿಕ್ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ನಿತ್ಯಾನಂದ ಸ್ವಾಮಿಯ ಸೋದರಳಿಯ ಸುಂದರೇಶ್ವರನ್ ತನ್ನ ಆಧ್ಯಾತ್ಮಿಕ ಪ್ರವಚನದ ವೀಡಿಯೊದಲ್ಲಿ ಹಿಂದೂ ಧರ್ಮವನ್ನು ರಕ್ಷಿಸಲು ನಿತ್ಯಾನಂದ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ ನಡೆದ ಶಿವರಾತ್ರಿ ಸತ್ಸಂಗದಲ್ಲಿ ನಿತ್ಯಾನಂದ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರು ಮಾತನಾಡುತ್ತಿರುವಾಗ ವೀಡಿಯೊ ಇದ್ದಕ್ಕಿದ್ದಂತೆ ನಿಂತುಹೋಯಿತು. ತಾಂತ್ರಿಕ ದೋಷಗಳಿಂದಾಗಿ ಇದು ನಿಂತುಹೋಗಿದೆ ಎಂದು ಹಲವರು ಭಾವಿಸಿದ್ದರು. ಆದರೆ, ಅಂದಿನಿಂದ, ನಿತ್ಯಾನಂದ ಎಲ್ಲಿದ್ದಾನೆ ಎಂಬುದು ತಿಳಿದುಬಂದಿಲ್ಲ. ಇತ್ತೀಚೆಗೆ ಯುಗಾದಿ ಹಬ್ಬದ ಸಮಯದಲ್ಲಿಯೂ ಅವನು ಎಲ್ಲಿಯೂ ಕಾಣಿಸಲಿಲ್ಲ.
ಇದೀಗ ನಿತ್ಯಾನಂದ ಅವರ ಸೋದರಳಿಯ ಸುಂದರೇಶ್ವರನ್ ಕಳೆದ ಭಾನುವಾರ ಒಂದು ವಿಡಿಯೋ ಬಿಡುಗಡೆ ಮಾಡಿದರು. ಹಿಂದೂ ಧರ್ಮವನ್ನು ರಕ್ಷಿಸಲು ಸ್ವಾಮಿ ನಿತ್ಯಾನಂದರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂದು ಅದು ಹೇಳುತ್ತದೆ. ಈ ಬಗ್ಗೆ ನಿತ್ಯಾನಂದ ಆಶ್ರಮದಿಂದ ಯಾವುದೇ ಪ್ರಕಟಣೆ ಬಂದಿಲ್ಲ.
ನಿತ್ಯಾನಂದ ಮೃತಪಟ್ಟಿದ್ದಾರೆ ಎಂದು ಪ್ರಚಾರ ನಡೆಯುತ್ತಿರುವುದು ಇದೇ ಮೊದಲಲ್ಲ. 2022ರಲ್ಲಿ ಅವರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಯಿತು.
ಆದರೆ ಇಂದು ಏಪ್ರಿಲ್ 1 ತಾರೀಕು ಆಗಿರುವುದರಿಂದ ಉದ್ದೇಶಪೂರ್ವಕವಾಗಿ ಸಾವಿನ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಆತನ ಟ್ರಸ್ಟ್‌ಗೆ ಸೇರಿದ ₹4000 ಕೋಟಿ ಮೌಲ್ಯದ ಆಸ್ತಿಗಳನ್ನು ಯಾರು ನಿರ್ವಹಿಸುತ್ತಾರೆ ಎಂಬ ಬಗ್ಗೆ ದೊಡ್ಡ ಪ್ರಶ್ನೆ ಕೂಡಾ ಉದ್ಭವಿಸಿದೆ. ಹೀಗೆ ನಿತ್ಯಾನಂದ ಸ್ವಾಮಿಯ ಸಾವಿನ ವದಂತಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ಈ ವದಂತಿಯ ಸತ್ಯಾಸತ್ಯತೆ ತಿಳಿಯಲು ಜನ ಕಾತರದಿಂದ ಕಾಯುತ್ತಿದ್ದಾರೆ.