ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಓಖ್ಲಾ ಕೈಗಾರಿಕಾ ಪ್ರದೇಶದಲ್ಲಿ ಅವಧಿ ಮುಗಿದ ಬ್ರ್ಯಾಂಡೆಡ್ ಆಹಾರ ಪದಾರ್ಥಗಳ ಮ್ಯಾನುಫ್ಯಾಕ್ಚರಿಂಗ್ ಮತ್ತು ಎಕ್ಸ್‌ಪೈರಿ ದಿನಾಂಕಗಳನ್ನು ಬದಲಾಯಿಸಿ, ಮರು-ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದ ಬೃಹತ್ ಅಕ್ರಮ ದಂಧೆಯನ್ನು ಜಂಟಿ ಕಾರ್ಯಾಚರಣೆಯ ಮೂಲಕ ಬಯಲಿಗೆಳೆಯಲಾಗಿದೆ. ಈ ಪ್ರಕರಣದಲ್ಲಿ ಕಂಪನಿಯ ಮಾಲೀಕ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದ್ದು, 20 ಲಕ್ಷ ರೂ.ಗೂ ಅಧಿಕ ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಬದರ್‌ಪುರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ‘ಮಿಷನ್ ಮುಕ್ತಿ’ ಎಂಬ ಸ್ವಯಂಸೇವಾ ಸಂಸ್ಥೆ ಒಟ್ಟಾಗಿ ಓಖ್ಲಾ ಫೇಸ್-2 ನಲ್ಲಿರುವ ‘ವೆಸ್ಟ್‌ಎಂಡ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಆವರಣದ ಮೇಲೆ ಈ ಜಂಟಿ ದಾಳಿ ನಡೆಸಿವೆ.
ಬಾಲಕಾರ್ಮಿಕರ ಪತ್ತೆಗೆ ಹೋಗಿದ್ದ ಅಧಿಕಾರಿಗಳಿಗೆ ಕಾಯ್ತಿತ್ತು ಶಾಕ್!
ಕಾರ್ಖಾನೆಯಲ್ಲಿ ಬಾಲಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ಆರಂಭದಲ್ಲಿ ಈ ದಾಳಿ ನಡೆಸಿದ್ದರು. ಆದರೆ, ಅಲ್ಲಿ ಯಾವುದೇ ಬಾಲಕಾರ್ಮಿಕರು ಪತ್ತೆಯಾಗಲಿಲ್ಲ. ಬದಲಿಗೆ, ಅವಧಿ ಮುಗಿದ ಅಥವಾ ಮುಗಿಯುತ್ತಾ ಬಂದಿರುವ ಆಹಾರ ಉತ್ಪನ್ನಗಳಿಗೆ ನಕಲಿ ಲೇಬಲ್ ಅಂಟಿಸಿ, ಮರು-ಪ್ಯಾಕ್ ಮಾಡಿ ಮಾರಾಟ ಮಾಡುವ ಬೃಹತ್ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ತಿಳಿಸಿದ್ದಾರೆ.
ಕೆಮಿಕಲ್ ಬಳಸಿ ದಿನಾಂಕ ಅಳಿಸುವಿಕೆ
ಆರೋಪಿಗಳು ಮಾರುಕಟ್ಟೆಯಿಂದ ಪ್ರಸಿದ್ಧ ಬ್ರ್ಯಾಂಡ್‌ಗಳ ಅವಧಿ ಮುಗಿಯುವ ಹಂತದಲ್ಲಿರುವ ಅಥವಾ ಈಗಾಗಲೇ ಅವಧಿ ಮುಗಿದಿರುವ ಉತ್ಪನ್ನಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು. ನಂತರ ಕೆಮಿಕಲ್ ಥಿನ್ನರ್‌ಗಳನ್ನು ಬಳಸಿ ಪ್ಯಾಕೆಟ್‌ಗಳ ಮೇಲಿದ್ದ ಅಸಲಿ ತಯಾರಿಕಾ ಮತ್ತು ಎಕ್ಸ್‌ಪೈರಿ ದಿನಾಂಕಗಳನ್ನು ಅಳಿಸಿ ಹಾಕುತ್ತಿದ್ದರು.
ಇದಕ್ಕಾಗಿ ವಿಶೇಷ ಪ್ರಿಂಟಿಂಗ್ ಯಂತ್ರಗಳು, ಸೀಲಿಂಗ್ ಉಪಕರಣಗಳು ಮತ್ತು ನಕಲಿ ಸ್ಟ್ಯಾಂಪ್‌ಗಳನ್ನು ಬಳಸಲಾಗುತ್ತಿತ್ತು. ಇವುಗಳ ಸಹಾಯದಿಂದ ಹೊಸ ದಿನಾಂಕಗಳು, ಬ್ಯಾಚ್ ನಂಬರ್, ಬಾರ್‌ಕೋಡ್ ಮತ್ತು ಎಂಆರ್‌ಪಿ ಸ್ಟಿಕ್ಕರ್‌ಗಳನ್ನು ಮುದ್ರಿಸಿ, ಉತ್ಪನ್ನಗಳು ಅಸಲಿಯಾಗಿ ಕಾಣುವಂತೆ ಮರು-ಪ್ಯಾಕ್ ಮಾಡಲಾಗುತ್ತಿತ್ತು.
ಹೀಗೆ ತಯಾರಿಸಿದ ವಿಷಪೂರಿತ ಆಹಾರಗಳನ್ನು ಸಾರ್ವಜನಿಕರ ಆರೋಗ್ಯದ ಬಗ್ಗೆ ಕಿಂಚಿತ್ತೂ ಯೋಚಿಸದೆ ಸಗಟು ಮಾರುಕಟ್ಟೆಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ವಿದೇಶಗಳಿಗೆ ರಫ್ತು ಮಾಡಲು ಸಿದ್ಧಪಡಿಸಲಾಗಿತ್ತು.
ವಶಪಡಿಸಿಕೊಂಡ 50,000 ಕ್ಕೂ ಹೆಚ್ಚು ಉತ್ಪನ್ನಗಳು
ದಾಳಿಯ ವೇಳೆ ಗೋದಾಮಿನಲ್ಲಿ ತಂಪು ಪಾನೀಯಗಳು, ಹೆಲ್ತ್ ಡ್ರಿಂಕ್ಸ್, ಇನ್‌ಸ್ಟಂಟ್ ನೂಡಲ್ಸ್, ಶುದ್ಧ ತುಪ್ಪ ಮತ್ತು ಪ್ಯಾಕ್ ಮಾಡಿದ ಜ್ಯೂಸ್‌ಗಳು ಪತ್ತೆಯಾಗಿವೆ. FSSAI ಪ್ರಕಾರ, ಗೋದಾಮಿನಲ್ಲಿ 50,000 ಕ್ಕೂ ಹೆಚ್ಚು ಆಹಾರ ಮತ್ತು ಆಹಾರೇತರ ಉತ್ಪನ್ನಗಳಿದ್ದು, ಅವುಗಳಲ್ಲಿ ಹೆಚ್ಚಿನವು ನಕಲಿ ಮ್ಯಾನುಫ್ಯಾಕ್ಚರಿಂಗ್ ದಿನಾಂಕಗಳನ್ನು ಹೊಂದಿದ್ದವು.
ಇದನ್ನೂ ಓದಿ:
70 ವರ್ಷದ ಮಾಲೀಕ ಸೇರಿದಂತೆ 7 ಮಂದಿ ಅರೆಸ್ಟ್
ಬಂಧಿತ ಆರೋಪಿಗಳನ್ನು ಕಂಪನಿಯ 70 ವರ್ಷದ ಮಾಲೀಕ ದರ್ಶನ್ ಸಿಂಗ್ ಸಚ್ದೇವ, ಮ್ಯಾನೇಜರ್ ನಿತೇಶ್ ಭರದ್ವಾಜ್, ಅಕೌಂಟೆಂಟ್ ನರೇಂದರ್ ಕುಮಾರ್, ಆಪರೇಟರ್ ಕಪಿಲ್, ಗೋದಾಮು ಕೀಪರ್ ಲಕ್ಕಿ ಓಜಾ ಮತ್ತು ಮೇಲ್ವಿಚಾರಕರಾದ ಪ್ರೇಮ್ ಯಾದವ್ ಮತ್ತು ಪವನ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ವಂಚನೆ ಮತ್ತು ಅಸುರಕ್ಷಿತ ಆಹಾರ ಪದಾರ್ಥಗಳ ಮಾರಾಟದ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಡಿಯಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ FSSAI, ಸಾರ್ವಜನಿಕರು ಇಂತಹ ನಕಲಿ ಮತ್ತು ಕಲಬೆರಕೆ ಆಹಾರ ಉತ್ಪನ್ನಗಳ ಬಗ್ಗೆ ಸಂಶಯ ಬಂದಲ್ಲಿ ತಕ್ಷಣ ವರದಿ ಮಾಡುವಂತೆ ಮನವಿ ಮಾಡಿದೆ.



