ಕಾಲೇಜು ಉಳಿಯಬೇಕಾದರೆ ಮಕ್ಕಳನ್ನು ಕಳುಹಿಸಿ: ಅಪ್ಪಚ್ಚುರಂಜನ್

ಹೊಸದಿಗಂತ ವರದಿ, ಸೋಮವಾರಪೇಟೆ:

ಕಾಲೇಜು ಉಳಿಯಬೇಕಾದರೆ ಪೋಷಕರು ತಮ್ಮ ಮಕ್ಕಳನ್ನು ಅಕ್ಕಪಕ್ಕದ ಕಾಲೇಜುಗಳಿಗೆ ಕಳುಹಿಸಿಕೊಟ್ಟು ಸಹಕರಿಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಮನವಿ ಮಾಡಿದರು.
ಇಲ್ಲಿನ ಯಡೂರು ಬಿ.ಟಿ.ಸಿ.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೋಷಕರ ಮತ್ತು ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಳೀಯವಾಗಿ ಇರುವ ತಮ್ಮ ಮಕ್ಕಳನ್ನು ದೂರದೂರಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಬಾರದು. ಮಕ್ಕಳನ್ನು ಕಾಲೇಜಿಗೆ ಕಳುಹಿಸಿದ ನಂತರ ತನ್ನ ಜವಾಬ್ದಾರಿ ಮುಗಿದಿದೆ ಎಂದು ಭಾವಿಸದೆ ಆಗಿಂದಾಗ್ಗೆ ಮಕ್ಕಳ ಬಗ್ಗೆ ಕಾಲೇಜಿಗೆ ಬಂದು ವಿಚಾರಿಸುವುದರ ಜೊತೆಗೆ ಪ್ರಾಧ್ಯಾಪಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಪೋಷಕರ ಬೇಜವಾಬ್ದಾರಿಯಿಂದ ಮಕ್ಕಳು ತಪ್ಪು‌ದಾರಿ ಹಿಡಿಯುತ್ತಾರೆ ಎಂದರು.
ಹಾಗೆಯೇ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಂಸಿಎ, ಹೋಟೆಲ್ ಮ್ಯಾನೆಜ್‌ಮೆಂಟ್‌, ಟೂರಿಸಂ ಕೋರ್ಸ್’ಗಳನ್ನು ಪ್ರಾರಂಭಿಸಲು ನಿರ್ದಾರಿಸಲಾಗಿದೆ. ಈ ಬಗ್ಗೆ ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಆಸಕ್ತಿ ಮತ್ತು ಮುತುವರ್ಜಿ ವಹಿಸಬೇಕು. ಕಾಲೇಜಿನ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ಹೆಚ್ಚಿನ ಮುತುವರ್ಜಿ ಇರಬೇಕು. ಈ ಕಾಲೇಜಿನಲ್ಲಿ ವಾತಾವರಣ ಉತ್ತಮ ರೀತಿಯಲ್ಲಿದೆ. ಎಲ್ಲಾ ಸವಲತ್ತುಗಳು‌ ಕೂಡಾ ಖಾಸಗಿ ಕಾಲೇಜಿಗಿಂತಲೂ‌ ಹೆಚ್ಚಾಗಿದೆ. ಈ ಬಗ್ಗೆ ಸಮರ್ಪಕವಾದ ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.
ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಗುತ್ತಿಗೆದಾರ ಮನುಕುಮಾರ್ ರೈ ಮಾತನಾಡಿ, ಕಾಲೇಜಿನ ಅಭಿವೃದ್ದಿಯ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು. ಮುಂದಿನ‌ ದಿನಗಳಲ್ಲಿ ಕಾಲೇಜಿಗೆ ನ್ಯಾಕ್ ಸಮಿತಿ ಆಗಮಿಸಲಿದ್ದು, ಕಾಲೇಜಿನ ಎಲ್ಲಾ ಕಾರ್ಯಗಳಿಗೂ‌ ಸ್ಪಂದಿಸಬೇಕು ಎಂದರು.
ಕಾಲೇಜಿನ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಮಹೇಶ್ ಮಾತನಾಡಿ, ಈ ಹಿಂದಿನ ಪರಿಸ್ಥಿತಿಗಳನ್ನು ದೂರವಿಟ್ಟು ಕಾಲೇಜಿನ ಅಭಿವೃದ್ದಿಗಾಗಿ ಎಲ್ಲರೂ‌ ಶ್ರಮಿಸೋಣ ಎಂದರು.
ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಸಲಹೆ ಸೂಚನೆಗಳನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲ ಹೆಚ್.ಎನ್.ರಾಜು ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಗೋಪಾಲ್, ಧರ್ಮಪ್ಪ, ತಂಗಮ್ಮ, ಶರತ್, ಪ್ರಕಾಶ್, ಭಾನುಪ್ರಕಾಶ್, ಉಪನ್ಯಾಸಕರಾದ ಧನಲಕ್ಷ್ಮಿ, ದೇವರಾಜು, ಫೌಜಿಯಾ, ವಿಂದ್ಯಾ, ವೇಣುಗೋಪಾಲ್, ಸಂಗೀತಾ, ಆಶಿಕಾ, ಸಿದ್ದೇಶ್‌ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!