ದಿಗಂತ ವರದಿ ಶಿವಮೊಗ್ಗ :
ವಿಧಾನ ಪರಿಷತ್ ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ಎಂ.ಬಿ. ಭಾನುಪ್ರಕಾಶ್ (68) ಸೋಮವಾರ ಮಧ್ಯಾಹ್ನ ನಿಧನರಾದರು.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಇಂದು ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಹಿಸಿದ್ದ ಅವರು ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡಿ ಬೆಲೆ ಏರಿಕೆ ಖಂಡಿಸಿದ್ದರು. ಪ್ರತಿಭಟನೆ ಮುಗಿದು ಇನ್ನೇನು ತೆರಳುತ್ತಿದ್ದಾಗ ಪ್ರತಿಭಟನಾ ಸ್ಥಳ ಶೀನಪ್ಪ ಶೆಟ್ಟಿ ವೃತ್ತದಲ್ಲಿಯೇ ಕುಸಿದು ಬಿದ್ದರು.
ತಕ್ಷಣವೇ ಅವರನ್ನು ಅಲ್ಲಿಯೇ ಇದ್ದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಸಂಸ್ಕೃತ ಗ್ರಾಮ ಮತ್ತೂರಿನವರಾದ ಇವರು ಜನ ಸಂಘ ಕಾಲದಿಂದಲೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಹೋರಾಟದಲ್ಲಿ ತೊಡಗಿಕೊಂಡಿದ್ದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಗಿ, ರಾಜ್ಯ ಪ್ರಕೋಷ್ಠಗಲಕಲ ಸಂಯೋಜಕರಾಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ವಿಧಾನ ಪರಿಷತ್ ಶಾಸಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀಯುತರು ಹಲವು ಸಂಘ ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಒಮ್ಮೆ ಲೋಕಸಭೆಗೂ ಸ್ಪರ್ಧೆ ಮಾಡಿದ್ದರು.
ಆರ್ ಎಸ್ ಎಸ್ ಹಾಗೂ ಬಿಜೆಪಿಯ ನಡುವೆ ಸಂಪರ್ಕ ಕೊಂಡಿಯಾಗಿದ್ದ ಇವರು, ಪಕ್ಷದಲ್ಲಿ ಎಂತಹ ಪರಿಸ್ಥಿತಿ ಬಂದರೂ ಅದನ್ನು ಸಮಚಿತ್ತದಿಂದ ಪರಿಹರಿಸುವ ಜವಾಬ್ದಾರಿಗೆ ಹೆಗಲು ಕೊಡುತ್ತಿದ್ದರು.