ಹಿರಿಯ ಪತ್ರಕರ್ತ, ಅಂಕಣಕಾರ, ಅನಂತ ವೈದ್ಯ ವಿಧಿವಶ

ಹೊಸದಿಗಂತ ವರದಿ ಯಲ್ಲಾಪುರ:

ಹಿರಿಯ ಪತ್ರಕರ್ತ, ಅಂಕಣಕಾರ, ಅನಂತ ವೈದ್ಯ ಅವರು ಅನಾರೋಗ್ಯದಿಂದಾಗಿ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಪಟ್ಟಣದ ಹುಲ್ಲೂರ ಮನೆಯಲ್ಲಿರುವ ಸ್ವಗೃಹದಲ್ಲಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನ ಸಲ್ಲಿಸಲಾಯಿತು.

ಮೃತರು ಮೂಲತಃ ಅಂಕೋಲಾ ತಾಲೂಕಿನ ವೈದ್ಯ ಹೆಗ್ಗಾರಿನವರಾಗಿದ್ದು, ಮಡದಿ ವಿಜಯಶ್ರೀ, ಇಬ್ಬರು ಪುತ್ರಿಯರಾದ ಕವಿತಾ, ಸಂಗೀತಾ, ಓರ್ವ ಪುತ್ರ ಕಿರಣ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ರಾಜ್ಯ ಮಟ್ಟದ ದಿನಪತ್ರಿಕೆಯ ವರದಿಗಾರರಾಗಿ ಕೆಲವು ವರ್ಷ ಕೆಲಸ ಮಾಡಿದ್ದರು.

ಕನ್ನಡ ಮತ್ತು ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವಿದ್ದ ಜ್ಞಾನಸಾಗರ ವೈದ್ಯರಾಗಿದ್ದರು. ಯಕ್ಷಗಾನದ ಮೊಟ್ಟಮೊದಲ ಮಾಸಪತ್ರಿಕೆ ಯಕ್ಷರಂಗ ವನ್ನು ಸಂಪಾದಕರಾಗಿ ಹಲವು ವರ್ಷ ತಮ್ಮ ಪ್ರಕಾಶ ಪ್ರಿಂಟಿಂಗ್ ಪ್ರೆಸ್ಸಿನ ಮೂಲಕ ಪ್ರಕಟಿಸಿದವರು. ಯಕ್ಷಗಾನದ ಅರ್ಥಧಾರಿಗಳಾಗಿ ತುಂಬ ಹೆಸರು ಮಾಡಿದ್ದರು. ಯಕ್ಷಗಾನದ ಶ್ರೇಷ್ಠ ಕಲಾವಿದರೂ ಅರ್ಥಧಾರಿಗಳಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟ ರವರ ಚಿಂತನೆಗಳನ್ನು ಸಂಗ್ರಹಿಸಿ ಜ್ಞಾನಯಜ್ಞ ಎಂಬ ಪುಸ್ತಕವನ್ನು ಸಂಪಾದಿಸಿ ಪ್ರಕಟಿಸಿದ್ದರು.

ಇವರು ಬರೆದ “ಪಾದುಕಾ ಪ್ರಧಾನ” ಗ್ರಂಥ ಕೆಲವು ವರ್ಷಗಳ ಕೆಳಗೆ ಪ್ರಕಟಗೊಂಡಿದೆ. ಪುರಾಣ ಮತ್ತು ಭಾರತಗಳಲ್ಲಿನ ವಿಶಿಷ್ಟ ಸಂಗತಿಗಳನ್ನಾಧರಿಸಿದ ಅಂಕಣವನ್ನು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಬರೆದಿರುವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!