ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ಬಾಬು ಅವರ ಇಬ್ಬರು ಗಂಡು ಮಕ್ಕಳು ಆಸ್ತಿ ವಿಷಯಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದು, ಕಿರಿಯ ಮಗ ಮಂಚು ಮನೋಜ್, ಸ್ವಂತ ತಂದೆ ಮೋಹನ್ಬಾಬು ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರ ಬೆನ್ನಲ್ಲೆ ಹಿರಿಯ ನಟ ಮೋಹನ್ ಬಾಬು ಸಹ ಪುತ್ರ ಮಂಚು ಮನೋಜ್ ವಿರುದ್ಧ ದೂರು ದಾಖಲಿಸಿದ್ದಾರೆ.
ಮಂಚು ಕುಟುಂಬದ ಇಬ್ಬರು ಪುತ್ರರಾದ ಮಂಚು ಮನೋಜ್ ಹಾಗೂ ಮಂಚು ವಿಷ್ಣು ನಡುವೆ ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳು ನಡೆಯುತ್ತಿದ್ದು, ಮೋಹನ್ಬಾಬು ಅವರು ಹಿರಿಯ ಪುತ್ರ ಮಂಚು ವಿಷ್ಣು ಪರ ನಿಂತಿದ್ದಾರೆ.
ಕುಟುಂಬಕ್ಕೆ ಸೇರಿದ ಶಾಲಾ-ಕಾಲೇಜು ವ್ಯವಹಾರದಲ್ಲಿ ಮಂಚು ಮನೋಜ್ ಕುಟುಂಬಕ್ಕೆ ಮೋಸ ಮಾಡಿ ಹಣಕಾಸು ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಇದೇ ವಿಷಯದಲ್ಲಿ ಅಣ್ಣ-ತಮ್ಮಂದಿರ ನಡುವೆ ಹಲವು ತಿಂಗಳುಗಳಿಂದ ಗಲಾಟೆಗಳು ನಡೆಯುತ್ತಲೇ ಇವೆ.
ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ವಿವಾದದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮಂಚು ಮನೋಜ್, ಅಣ್ಣ ಮಂಚು ವಿಷ್ಣು ಮತ್ತು ಅಪ್ಪ ಮೋಹನ್ಬಾಬು ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಮೋಹನ್ ಬಾಬು ತಮ್ಮ ವಿರುದ್ಧ ಮಾಡಿರುವ ಸುಳ್ಳು ಎಂದರಿರುವ ಮಂಚು ಮನೋಜ್, ನಮ್ಮ ತಂದೆಯವರ ಕೆಟ್ಟ ನಡವಳಿಕೆಯಿಂದ ಮನೆಯಲ್ಲಿ ಸಮಸ್ಯೆ ಆಗಿದೆಯೆಂದು, ಅವರು ಬಳಸುವ ಅವಾಚ್ಯ ಭಾಷೆಯಿಂದ ಮನೆಯ ಕೆಲಸಗಾರರು ಸಹ ಆತಂಕದಲ್ಲಿಯೇ ಬದುಕುತ್ತಿದ್ದಾರೆ ಎಂದಿದ್ದಾರೆ.
ಆಸ್ತಿ ವಿವಾದದ ಬಗ್ಗೆ ಮಾತನಾಡಿರುವ ಮಂಚು ಮನೋಜ್, ನಾನು ಎಂದಿಗೂ ಆಸ್ತಿಯಲ್ಲಿ ಭಾಗ ಕೇಳಿಲ್ಲ. ಕುಟುಂಬದ ಹಣವನ್ನು ದುರುಪಯೋಗ ಪಡೆಸಿಕೊಂಡಿಲ್ಲ. ಆದರೆ ಇದೇ ಪ್ರಶ್ನೆಗಳನ್ನು ಮಾಧ್ಯಮಗಳವರು ಮಂಚು ವಿಷ್ಣುಗೆ ಕೇಳಬೇಕು ಎಂದಿದ್ದಾರೆ. ನನ್ನನ್ನು ಕುಟುಂಬದಿಂದ ದೂರ ಇಡಲಾಗಿದೆ. ನನ್ನ ಸಿನಿಮಾಗಳನ್ನು ನಿಲ್ಲಿಸಲಾಗಿದೆ. ಆದರೆ ವಿಷ್ಣು ಸಿನಿಮಾಗಳಿಗೆ ಕುಟುಂಬದ ಬೆಂಬಲ ಸಿಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.