Tuesday, August 16, 2022

Latest Posts

ತಾರತಮ್ಯವನ್ನು ತೊಡೆದು ಹಾಕಲು ಸಂವೇದನಾಶೀಲತೆ ಸೂಕ್ತ ಅಸ್ತ್ರ: ರಾಜೇಶ್ ಪದ್ಮಾರ್

ಹೊಸದಿಗಂತ ವರದಿ,ಮಂಗಳೂರು:

ಭಾರತದ ಶ್ರೇಷ್ಠತೆ ಮತ್ತು ವೈವಿಧ್ಯತೆಗಳು ವಿಶೇಷತೆಗಳಾಗಿವೆ. ಆದರೆ ಅವುಗಳನ್ನನ್ನು ಅಸ್ಪೃಶ್ಯತೆ ನುಂಗಿ ಹಾಕಿದೆ. ತಾಳ್ಮೆ, ವೈಶಾಲ್ಯತೆ ಮತ್ತು ತೆರೆದ ಮನಸ್ಸು ಹೊಂದುವ ಮೂಲಕ ಆ ಕಳಂಕವನ್ನು ನಿವಾರಿಸುವುದು ಸಾಧ್ಯ. ಸಂವೇದನಾಶೀಲತೆ ತಾರತಮ್ಯವನ್ನು ತೊಡೆದು ಹಾಕುವುದಕ್ಕೆ ಸೂಕ್ತ ಅಸ್ತ್ರವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ, ಉಪನ್ಯಾಸಕ ರಾಜೇಶ್ ಪದ್ಮಾರ್ ಹೇಳಿದ್ದಾರೆ.
ಅವರು ಬುಧವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕುದ್ಮುಲ್ ರಂಗರಾವ್‌ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ‘ಸಾಮರಸ್ಯಕ್ಕೆ ಬೇಕು ತೆರೆದ ಮನಸ್ಸು’ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.
ಕುದ್ಮುಲ್ ರಂಗರಾವ್‌ರವರು ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ಕಂಡು ಮರುಗಿದರು. ಇತರರ ನೋವು ತನಗಾದ ನೋವಿದೆಂದು ಭಾವಿಸಿದರು ಮತ್ತು ಅದನ್ನು ತೊಡೆದು ಹಾಕಲು ಕಾರ್ಯತತ್ಪರರಾದರು. ಶೋಷಿತರಿಗಾಗಿ ಶಾಲೆ, ವಿದ್ಯಾರ್ಥಿ ನಿಲಯಗಳನ್ನು ತೆರೆದರು. ಶೋಷಿತರಿಗೆ ಜಮೀನು ಒದಗಿಸಿದರು. ಅಂತರ್ ಜಾತೀಯ ವಿವಾಹ, ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು. ಇಂತಹ ಕ್ರಾಂತಿಕಾರಿ ನಿರ್ಧಾರಗಳ ಮೂಲಕ ಸಮಾನ ಸಮಾಜಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡರು ಎಂದು ಪದ್ಮಾರ್ ವಿವರಿಸಿದರು.
ವೇದ, ಉಪನಿಷತ್ತುಗಳ ಕಾಲದಲ್ಲಿ ಸಮಾನತೆ ಇತ್ತು. ಅಂದು ತಾರತಮ್ಯಗಳಿಗೆ ಸ್ಥಾನ ಇರಲಿಲ್ಲ ಎಂದು ನುಡಿದ ಅವರು, ಶ್ರೇಷ್ಠತೆ ಎಂಬುದು ಸಮಾಜದಲ್ಲಿ ವ್ಯಸನವಾಗಿ ಬೆಳೆದು ನಿಂತಾಗ ತಾರತಮ್ಯದ ಕೊಳೆ ಸೃಷ್ಠಿಯಾಯಿತು. ಮುಂದೆ ಅದು ಸಹೋದರತೆಗೆ ಧಕ್ಕೆ ತಂಗಿತು. ಜಾತಿಗಳ ಕಾರಣಕ್ಕೆ ಸಾಮರಸ್ಯಕ್ಕೆ ಅಡ್ಡಿಯಾಯಿತು ಎಂದರು.
ಸ್ವಾತಂತ್ರ್ಯ ಬಂದ ಬಳಿಕ ಸಾಮಾಜಿಕ ತಾರತಮ್ಯಗಳ ನಿವಾರಣೆಗೆ ಟೊಂಕ ಕಟ್ಟಿದವರು, ಏಕತೆಯನ್ನು ಪ್ರತಿಪಾದಿಸಿ ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾದವರು ಗುರೂಜಿ ಗೋಳ್ವಲ್‌ಕರ್ ಅವರು. ಪ್ರಯಾಗ, ಉಡುಪಿ ಮತ್ತು ಉಜಿರೆಯಲ್ಲಿ ಜರಗಿದ ಮೂರು ಸಂತ ಸಮ್ಮೇಳನಗಳು ವ್ಯತ್ಯಾಸಗಳನ್ನು ಮರೆತು ಸಾಮರಸ್ಯ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಗುರೂಜಿಯವರ ಪ್ರಯತ್ನಗಳು ಧನಾತ್ಮಕ ಫಲಿತಾಂಶಗಳಿಗೆ ಮುನ್ನುಡಿಯಾದವು ಎಂದು ರಾಜೇಶ್ ಪದ್ಮಾರ್ ಹೇಳಿದರು.
ತಾರತಮ್ಯ, ಜಾತೀಯತೆ, ಅಸಮಾನತೆ ಇನ್ನು ನಮ್ಮಲ್ಲಿ ಇದೆ. ಇದು ಬದಲಾಗಲೇ ಬೇಕು, ಅದಕ್ಕೆ ಹರಿಕಾರರ ಅಗತ್ಯವಿದೆ. ಹರಿಕಾರರಿಗಾಗಿ ಕಾಯುವ ಬದಲಾಗಿ ನಾವೆಲ್ಲರೂ ಹರಿಕಾರರಾಗಬೇಕು. ಸಮಾಜದ ಸ್ವಾಸ್ಥ್ಯವನ್ನು ಕಳೆದು ಸಮಾನತೆಯ ಸಮಾಜಕ್ಕಾಗಿ ನಾವು ಮುಂದಡಿ ಇಡಬೇಕು ಎಂದು ಪದ್ಮಾರ್ ನುಡಿದರು.
ರಾಜೇಶ್ ಪದ್ಮಾರ್ ಬರೆದ ಕಿರು ಹೊತ್ತಿಗೆ ‘ಸಾಮರಸ್ಯಕ್ಕೆ ಬೇಕು ತೆರೆದ ಮನಸ್ಸು’ ಕೃತಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಂಘಚಾಲಕರಾದ ಡಾ.ವಾಮನ ಶೆಣೈ ಬಿಡುಗಡೆ ಮಾಡಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಚ.ನ.ಶಂಕರ ರಾವ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಸಾಮರಸ್ಯ ವೇದಿಕೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಕುದ್ಮುಲ್ ರಂಗರಾಯರ ಜನ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಶುಭಾಷಿಣಿ ಶ್ರೀವತ್ಸ ಸ್ವಾಗತಿಸಿದರು. ಮಂಗಳೂರು ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಡಾ.ಮೀನಾಕ್ಷಿ ರಾಮಚಂದ್ರ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss