ಹೊಸದಿಗಂತ ವರದಿ, ದಾವಣಗೆರೆ
ಪ್ರತ್ಯೇಕ ಪ್ರಕರಣಗಳಲ್ಲಿ ಸಾಲಬಾಧೆಯಿಂದ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹರಿಹರ ತಾಲೂಕು ಎಳೆಹೊಳೆ ಗ್ರಾಮದ ರೈತ ಅಶೋಕ ಹಾಗೂ ನ್ಯಾಮತಿ ತಾಲ್ಲೂಕು ಕುರುವ ತಾಂಡಾದ ರೈತ ಮಹಿಳೆ ಕಮಲಾಬಾಯಿ(50 ವರ್ಷ) ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಳೆಹೊಳೆ ಗ್ರಾಮದ ಅಶೋಕ ಕೃಷಿ ಹಾಗೂ ಟ್ರ್ಯಾಕ್ಟರ್ ಖರೀದಿಗೆಂದು ಬ್ಯಾಂಕಿನಲ್ಲಿ 4 ಲಕ್ಷ ರೂ., ಖಾಸಗಿಯಾಗಿ 6 ಲಕ್ಷ ರೂ. ಸಾಲ ಮಾಡಿದ್ದರು. ಸಮರ್ಪಕವಾಗಿ ಮಳೆಯಾಗದ ಕಾರಣ ಕಳೆದ ಮೂರು ವರ್ಷಗಳಿಂದ ಬೆಳೆ ಕೈಗೆ ಬಂದಿರಲಿಲ್ಲ. ಇದರಿಂದ ನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕುರುವ ತಾಂಡಾದ ಕಮಲಾಬಾಯಿ ತಮ್ಮ 2 ಎಕರೆ ಜಮೀನಿನಲ್ಲಿ ಒಂದು ವರ್ಷದ ಹಿಂದೆ ಅಡಿಕೆ ತೋಟ ಮಾಡಿದ್ದರು. ಮಗಳ ಮದುವೆಗೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 50,000 ರೂ. ಹಾಗೂ ತೋಟಕ್ಕಾಗಿ 5.40 ಲಕ್ಷ ರೂ. ಸಾಲ ಮಾಡಿದ್ದರು. ಮಳೆ ಕೈಕೊಟ್ಟ ಕಾರಣ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.