ಹೊಸ ದಿಗಂತ ವರದಿ, ಮಡಿಕೇರಿ:
ಮುಂದಿನ 2026ರಲ್ಲಿ ದೇಶದಾದ್ಯಂತ ಲೋಕಸಭೆ, ವಿಧಾನಸಭಾ ಕ್ಷೇತ್ರಗಳು ಮರು ವಿಂಗಡಣೆಯಾಗಲಿದ್ದು, ಆಗ ಕೊಡಗಿಗೂ ಪ್ರತ್ಯೇಕ ಲೋಕಸಭಾ ಸ್ಥಾನ ಲಭ್ಯವಾಗಲಿದೆ ಎಂದು ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ನುಡಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿಗೆ ಏನು ಕೊಡುಗೆ ನೀಡಿದ್ದೀರಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿ, ನಾನು ಮಡಿಕೇರಿಗೆ ಕ್ರಿಟಿಕಲ್ ಕೇರ್ ಸೆಂಟರ್ ತಂದಿದ್ದೇನೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಜಿಲ್ಲೆಗೆ 63 ಮೊಬೈಲ್ ಟವರ್ ನೀಡಿದ್ದೇನೆ. ಪ್ರಧಾನ ಮಂತ್ರಿಗಳ ಯೋಜನೆಯಡಿ 83 ಕಿ.ಮೀ. ಸುಸಜ್ಜಿತ ರಸ್ತೆ ನಿರ್ಮಿಸಿದ್ದೇನೆ. ಕುಡಿಯುವ ನೀರಿನ ಯೋಜನೆಗಳು ಜಾರಿಯಾಗಿದೆ. ಸಾಕಷ್ಟು ಯೋಜನೆಗಳಿಗೆ ಸಂಸದರ ನಿಧಿ ಬಳಕೆಯಾಗಿದೆ ಎಂದು ವಿವರಿಸಿದರು.
ಬಿಜೆಪಿ ಸರ್ಕಾರದ ಯೋಜನೆಗಳು, ಬಿಜೆಪಿ ನೀಡಿದ ಅನುದಾನಗಳನ್ನೇ ತಾನು ನೀಡಿದ್ದೆಂದು ಬಿಂಬಿಸಿ ಉದ್ಘಾಟಿಸಿ, ಭೂಮಿ ಪೂಜೆ ಮಾಡಲು ನಾಚಿಕೆಯಾಗೋದಿಲ್ಲವೇ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದ ಪ್ರತಾಪ್ ಸಿಂಹ, ಕೊಡಗಿನ ಜನರಿಗೆ ಟೋಪಿ ಹಾಕಲು ಸಿದ್ದರಾಮಯ್ಯ ಕೊಡಗಿಗೆ ಬಂದಿದ್ದರು ಟೀಕಿಸಿದರು.
14 ಬಜೆಟ್ ನೀಡಿರುವ ಸಿದ್ದರಾಮಯ್ಯ ಸುಳ್ಳು ರಾಮಯ್ಯ ಆಗಿದ್ದಾರೆ. ಬರೀ ಸುಳ್ಳು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕುಟುಕಿದ ಅವರು, ಕೊಡಗಿನಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಅನುದಾನ ನೀಡತೊಡಗಿದ್ದೇ ಬಿಜೆಪಿ ಸರ್ಕಾರ. ತಮ್ಮದೇ ಎಂ.ಎಲ್.ಸಿ ಇದ್ದರೂ ಕಾಂಗ್ರೆಸ್ ಹಾಕಿ ಪಂದ್ಯಾವಳಿಗೆ ಅನುದಾನ ನೀಡಿರಲಿಲ್ಲ. ಕೊಡವ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಹೀಗಿದ್ದರೂ ಅನುದಾನ ಇಲ್ಲ ಎಂದು ಸುಳ್ಳು ಹೇಳುವ ಕೆಲಸವನ್ನು ಕಾಂಗ್ರೆಸ್ ಶಾಸಕರು ಮಾಡಿದ್ದಾರೆ. ಬಿಜೆಪಿ ಭೂಮಿ ಪೂಜೆ ಮಾಡಿದ ಯೋಜನೆಗಳಿಗೇ ಸಿದ್ದರಾಮಯ್ಯ ಮತ್ತು ಶಾಸಕರು ಮತ್ತೆ ಮತ್ತೆ ಭೂಮಿ ಪೂಜೆ ಮಾಡುತ್ತಿರುವುದು ನಾಚಿಕೆಗೇಡು ಎಂದು ನುಡಿದರು.
ನಿಮ್ಮ ಮಾತನ್ನು ನಿಮ್ಮೂರಾದ ಮೈಸೂರಿನ ಜನರೇ ನಂಬುತ್ತಿಲ್ಲ. ಹೀಗಿರುವಾಗ ದೇಶಪ್ರೇಮಿಗಳಾದ ಕೊಡಗಿನ ಜನ ನಂಬುತ್ತಾರೆಯೇ ಎಂದು ವ್ಯಂಗ್ಯವಾಡಿದ ಪ್ರತಾಪ್ ಸಿಂಹ, ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಅವರು ತನ್ನದಲ್ಲದ ಯೋಜನೆಗಳ ಕ್ರೆಡಿಟ್ ತಾನು ತೆಗೆದುಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಅವರು ಶ್ಲಾಘನೀಯ ಎಂದು ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗಿನ ಶಾಸಕರು ತಮ್ಮ ದೂತರಿಂದ ಹೇಳಿಕೆ ಕೊಡಿಸುವ ಸಣ್ಣ ಬುದ್ಧಿಯ ರಾಜಕೀಯ ನಿಲ್ಲಿಸಿ ಕೊಡಗಿಗೆ ತಮ್ಮ ಪ್ರಯತ್ನದಿಂದಲೇ ಅನುದಾನ ತರಲಿ ಎಂದು ಸಲಹೆ ಮಾಡಿದ ಸಂಸದರು, ಸೂರ್ಯನಿಗೂ ಕೆಲವೊಮ್ಮೆ ಗ್ರಹಣ ಹಿಡಿಯುತ್ತದೆ. ನಂತರ ಪ್ರಜ್ವಲಿಸುವ ಸೂರ್ಯ ಕಾಣಿಸುತ್ತಾನೆ. ಅಂತೆಯೇ, ಕೊಡಗಿನಲ್ಲಿಯೂ ಬಿಜೆಪಿಗೆ ತಗುಲಿದ್ದ ಗ್ರಹಣ ದೂರವಾಗಿದೆ. 36 ವಿಎಸ್ ಎಸ್ ಎನ್ ಗಳ ಪೈಕಿ 32 ರಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬಂದಿರುವುದು ಬಿಜೆಪಿಯನ್ನು ಕೊಡಗಿನ ಜನತೆ ಬೆಂಬಲಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು.
ಏಕವಚನ ಬಳಕೆಗೆ ಕಿಡಿ: ಪತ್ರಿಕಾಗೋಷ್ಠಿಯಲ್ಲಿದ್ದ ವಿಧಾನಸಭೆಯ ಮಾಜಿ ಆದ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾರೆ. ಕೊಡಗಿಗೆ ಬಂದಾಗ ಬಿಜೆಪಿ ಸಂಸದರು, ಮಾಜಿ ಶಾಸಕರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ನಮಗೂ ಏಕವಚನದಲ್ಲಿ ಮಾತನಾಡಲು ತಿಳಿದಿದೆ. ಆದರೆ ಏಕವಚನ ಬಳಕೆ ಕೊಡಗಿನ ಸಂಸ್ಕೃತಿಯಲ್ಲ ಎಂದು ಕಿಡಿಕಾರಿದರು.
ಸತ್ಯ ತಿಳಿದಿದೆ: ಮಡಿಕೇರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನುದಾನ ನೀಡಿದ್ದು ಬಿಜೆಪಿ ಸರಕಾರ. ಆದರೆ ಕಾಂಗ್ರೆಸ್ ತನ್ನ ಕಾಲದಲ್ಲಿ ನಡೆದದ್ದು ಎಂಬಂತೆ ಎಸ್ ಪಿ ಕಚೇರಿಯನ್ನು ಉದ್ಘಾಟಿಸಿದೆ. ಬಿಜೆಪಿ ಅನುದಾನದಲ್ಲಿ ಎಸ್.ಪಿ ಕಚೇರಿ ನಿರ್ಮಾಣವಾಯಿತು ಎಂಬ ಸತ್ಯ ಕೊಡಗಿನವರಿಗೆ ತಿಳಿದಿದೆ ಎಂದು ನುಡಿದರು.
ಸಿದ್ದರಾಮಯ್ಯ ಉದ್ಘಾಟನೆಗೆ ಮಾತ್ರ ಅದೃಷ್ಟವಂತ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಜ್ಯದಲ್ಲಿ ಬರ ತಾಂಡವವಾಡಿದೆ. ಬರ, ಮಳೆಯೇ ಸಿದ್ದರಾಮಯ್ಯ ರಾಜ್ಯದ ಜನತೆಗೆ ನೀಡುವ ಕೊಡುಗೆಯಾಗಿದೆ ಎಂದರು.
ಕೊಡಗಿನ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಲ್ಲಿಯೂ ಸಿದ್ದರಾಮಯ್ಯ ವಿಫಲರಾಗಿದ್ದು, ಕೊಡಗು ಎಂದರೆ ಸಿದ್ದರಾಮಯ್ಯ ಪಾಲಿಗೆ ಅಲರ್ಜಿ ಕೊಡಗಿನ ಜನತೆಯನ್ನು ನಿರ್ಲಕ್ಷಿಸಿದ ಸಿದ್ದರಾಮಯ್ಯ ಅವರಿಂದ ಇಲ್ಲಿಯ ಜನ ಪಾಠ ಕಲಿಯಬೇಕಾಗಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಮಾಚಿಮಾಡ ರವೀಂದ್ರ, ಬಿಜೆಪಿ ವಕ್ತಾರರಾದ ಮಹೇಶ್ ಜೈನಿ, ಸುಬ್ರಹ್ಮಣ್ಯ ಉಪಾಧ್ಯಾಯ ಹಾಜರಿದ್ದರು.