ಹೊಸದಿಗಂತ ಬೆಳಗಾವಿ:
ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕೈಚಳಕ ತೋರಿ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಆಟೋನಗರದಲ್ಲಿರುವ ಅಮೆಜಾನ್ ಕಂಪನಿಯ ಅಧಿಕೃತ ವಿತರಕರಾದ ಪ್ರವೀಣ ಪದ್ಮರಾಜ ಎಂಬುವವರು ತಮ್ಮ ಗೋದಾಮಿನಿಂದ ಎಲೆಕ್ಟ್ರಾನಿಕ್ ವಸ್ತುಗಳು ನಾಪತ್ತೆಯಾಗುತ್ತಿರುವ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಜೂನ್ 14, 2025 ರಿಂದ ಆಗಸ್ಟ್ 02, 2025 ರ ನಡುವಿನ ಅವಧಿಯಲ್ಲಿ ಹಂತ ಹಂತವಾಗಿ ವಿವಿಧ ಕಂಪನಿಗಳ ಬೆಲೆಬಾಳುವ ಗ್ಯಾಜೆಟ್‌ಗಳು ಕಳ್ಳತನವಾಗಿದ್ದವು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ, ಅಮೆಜಾನ್ ಕಂಪನಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಶುಭಂ ಶಶಿಕಾಂತ ದಿಂಡೆ (29) ಎಂಬಾತನೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಬಂಧಿತನಿಂದ ಸುಮಾರು 4,49,321 ರೂಪಾಯಿ ಮೌಲ್ಯದ ಈ ಕೆಳಗಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ:
18 ವಿವಿಧ ಕಂಪನಿಯ ಸ್ಮಾರ್ಟ್ ಫೋನ್‌ಗಳು
01 ಟ್ಯಾಬ್ಲೆಟ್
05 ಸ್ಮಾರ್ಟ್ ವಾಚ್‌ಗಳು
01 ಗಿಂಬಲ್ ಹಾಗೂ ಏರ್‌ಪಾಡ್ಸ್ ಮತ್ತು ಹೆಡ್‌ಫೋನ್‌ಗಳು
ಈ ಬಗ್ಗೆ ಮಾಳಮಾರುತಿ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

