ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದ (Afghanistan) ಹೆರಾತ್‌ನಲ್ಲಿ (Herat) ಸಂಭವಿಸಿದ ಸರಣಿ ಭೂಕಂಪದಲ್ಲಿ (Afghan Earthquake) ಮೃತಪಟ್ಟವರ ಸಂಖ್ಯೆಯು 2000ಕ್ಕೆ ಏರಿಕೆಯಾಗಿದೆ.
ಇನ್ನೂ ಸಾಕಷ್ಟು ಜನರು ಅವಶೇಷಗಳಡಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.
ಹೆರಾತ್ ನಗರ ಮಾತ್ರವಲ್ಲದೇ, ಪಶ್ಚಿಮ ಅಫಘಾನಿಸ್ತಾನದ ಗ್ರಾಮೀಣ ಪ್ರದೇಶದಲ್ಲೂ ಭೂಕಂಪದ ತೀವ್ರತೆ ಹೆಚ್ಚಾಗಿದ್ದು, ಸಾಕಷ್ಟು ಸಾವು ನೋವು ಸಂಭವಿಸಿದೆ.
ಅಫ್ಘಾನಿಸ್ತಾನದ ಹೆರಾತ್ ನಗರದಲ್ಲಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರಿಕ್ಟರ್ ಮಾಪನದಂತೆ 4.3ರ ತೀವ್ರತೆಯ ಭೂಕಂಪ ಸಂಭವಿಸಿದೆ. ಹಾಗೆಯೇ, ಇದಾದ ಬಳಿಕ ಮಧ್ಯಾಹ್ನ 12.11ರ ಸುಮಾರಿಗೆ 6.1 ತೀವ್ರತೆಯ ಭೂಕಂಪ ಉಂಟಾಗಿದೆ. ಅಷ್ಟೇ ಅಲ್ಲ, ಮಧ್ಯಾಹ್ನ 12.42ರ ಸುಮಾರಗೆ 6.2ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.
ಹೆರಾತ್ ನಗರ, ಜೆಂಡೆಜಾನ್ ಹಾಗೂ ಘೋರಿಯಾನ್ ಜಿಲ್ಲೆಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದ ಅನುಭವವಾಗುತ್ತಲೇ ಸಾವಿರಾರು ಜನ ಮನೆಯಿಂದ ಹೊರಗೆ ಬಂದರು. ರಸ್ತೆಗಳ ಮೇಲೆಯೇ ಇಡೀ ದಿನ ಕಳೆದ ಜನ ಅನ್ನ-ನೀರಿಲ್ಲದೆ ಪರದಾಡಿದರು ಎಂದು ತಿಳಿದುಬಂದಿದೆ.