ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ: ಪರಿಷತ್‌ನಲ್ಲಿ ಹಿಂದು ಧಾರ್ಮಿಕ ದತ್ತಿ ಬಿಲ್ ತಿರಸ್ಕೃತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆಯಲ್ಲಿ ಮಂಡಿಸಿದ ಹಿಂದು ಧಾರ್ಮಿಕ ದತ್ತಿ ತಿದ್ದುಪಡಿ ಮಸೂದೆ ಭಾರಿ ವಿರೋಧ, ಕೋಲಾಹಲ ನಡುವೆ ಪಾಸ್ ಮಾಡುವಲ್ಲಿ ಸರಕಾರ ಯಶಸ್ವಿಯಾಗಿತ್ತು. ಆದರೆ ಇದೀಗ ವಿಧಾನ ಪರಿಷತ್‌ನಲ್ಲಿ ಹಿಂದು ಧಾರ್ಮಿಕ ದತ್ತಿ ತಿದ್ದುಪಡಿ ಮಸೂದೆ ಪಾಸ್ ಆಗದೆ ಹಿನ್ನಡೆಯಾಗಿದೆ.

ಕಾಂಗ್ರೆಸ್ ಸರಕಾರ ಬಿಲ್ ಮಂಡನೆ ಮಾಡಿದರೂ ಪರಿಷತ್‌ನಲ್ಲಿ ಸರ್ಕಾರಕ್ಕೆ ಸಂಖ್ಯಾಬಲದ ಕೊರತೆ ಕಾರಣ ಬಿಲ್ ಬಿದ್ದು ಹೋಯಿತು. ಇದೇ ವೇಳೆ ಬಿಜೆಪಿ ಸದಸ್ಯರು ಜೈಶ್ರೀರಾಮ್ ಘೋಷಣೆ ಕೂಗಿದರೆ, ಕಾಂಗ್ರೆಸ್ ಸದಸ್ಯರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು.

ಧಾರ್ಮಿಕ ದತ್ತಿ ತಿದ್ದುಪಡಿ ಮಸೂದೆ ವಿರುದ್ಧ ವಿಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ವಿಪಕ್ಷಗಳ ಒತ್ತಡಕ್ಕೆ ಮಣಿದ ಸಚಿವ ರಾಮಲಿಂಗಾ ರೆಡ್ಡ, ಸೋಮವಾರ ಮತ್ತೆ ಬಿಲ್ ಮಂಡಿಸುತ್ತೇನೆ ಎಂದರು. ಆದರೆ ಇದಕ್ಕೆ ಉಭಾಸಭಾಪತಿ ಪ್ರಾಣೇಶ್ ಆಕ್ಷೇಪ ವ್ಯಕ್ತಪಡಿಸಿದ್ದರು. ಒಮ್ಮೆ ಪರ್ಯಾಲೋಚನೆಗೆ ತೆಗೆದುಕೊಂಡ ಬಿಲ್ ಮುಂದೂಡಲು ಸಾಧ್ಯವಿಲ್ಲ ಎಂದು ಉಪಸಭಾಪತಿ ಹೇಳಿದ್ದಾರೆ.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಈ ಕುರಿತು ಚರ್ಚಿಸುವ ಅಗತ್ಯವಿದೆ. ಹೀಗಾಗಿ ಅವಕಾಶ ನೀಡಬೇಕು ಎಂದು ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದಾರೆ. ಆದರೆ ಪರ್ಯಾಲೋಚನೆಗೆ ತೆಗೆದುಕೊಂಡಿದ್ದೇವೆ. ಮಂದೂಡಲು ಅಸಾಧ್ಯ ಎಂದು ಉಪಸಭಾಪತಿ ಹೇಳಿದ್ದಾರೆ. ಚರ್ಚೆ ಮಾಡಿ ನಿರ್ಧರಿಸಿ ಎಂದು ಕಲಾಪವನ್ನು 10 ನಿಮಿಷ ಮುಂದೂಡಲಾಯಿತು.

ಕಲಾಪ ಮತ್ತೆ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಧಾರ್ಮಿಕ ದತ್ತಿ ಮಸೂದೆಯನ್ನು ಅನಿವಾರ್ಯವಾಗಿ ಮತಕ್ಕೆ ಹಾಕಿತು. ಬಿಜೆಪಿ ಹಾಗೂ ವಿರೋಧ ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇತ್ತ ಆಡಳಿತ ಪಕ್ಷದ ಐವರು ಸದಸ್ಯರು ಮಾತ್ರ ಹಾಜರಿದ್ದರು. ಅನಿವಾರ್ಯವಾಗಿ ಬಿಲ್ ಮತಕ್ಕೆ ಹಾಕಲಾಯಿತು. ಈ ವೇಳೆ ವಿಪಕ್ಷಗಳ ಸಂಖ್ಯಾಬಲ ಹೆಚ್ಚಿದ್ದ ಕಾರಣ ಬಿಲ್ ಪಾಸ್ ಆಗಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!