ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಹದಿಹರೆಯದವರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಒಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ದೇಶಾದ್ಯಂತ ಇರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳ ಪಠ್ಯಕ್ರಮದಲ್ಲಿ ‘ಸಮಗ್ರ ದೈಹಿಕ ಹಾಗೂ ಲೈಂಗಿಕ ಶಿಕ್ಷಣ’ವನ್ನು ಅಧಿಕೃತ ವಿಷಯವಾಗಿ ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು, ರಾಷ್ಟ್ರೀಯ ತಜ್ಞರ ಸಮಿತಿ ನೀಡಿರುವ ಈ ಕ್ರಾಂತಿಕಾರಿ ವರದಿಯನ್ನು ಸರ್ಕಾರ ಸಂಪೂರ್ಣವಾಗಿ ಒಪ್ಪಿಕೊಂಡಿದ್ದು, ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ ತಕ್ಷಣವೇ ದೇಶಾದ್ಯಂತ ಇದನ್ನು ಜಾರಿಗೆ ತರಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ -2020 ಅನುಗುಣವಾಗಿ ಎನ್‌ಸಿಇಆರ್‌ಟಿ ಹೊಸ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಿದೆ. ಮಕ್ಕಳಿಗೆ ಗುಡ್‌ಟಚ್, ಬ್ಯಾಡ್ ಟಚ್, ದೌರ್ಜನ್ಯದ ಸಮಯದಲ್ಲಿ ಹೇಗೆ ರಕ್ಷಿಸಿಕೊಳ್ಳಬೇಕು, ಯಾರಿಗೆ ದೂರು ನೀಡಬೇಕು. ದೇಹದ ಬಗ್ಗೆ ತಿಳಿವಳಿಕೆ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪ್ರತಿ ವಾರಕ್ಕೆ ಕನಿಷ್ಠ ಎರಡು ಬಾರಿ 15 ರಿಂದ 20 ನಿಮಿಷಗಳ ಕಾಲ ಈ ಜಾಗೃತಿ ತರಗತಿಗಳನ್ನು ನಡೆಸುವುದು ಕಡ್ಡಾಯವಾಗಲಿದೆ.
ಇದರ ಜೊತೆಗೆ ಪೋಷಕರಿಗೂ ಸಭೆ ಮಾಡಲಾಗುತ್ತದೆ. ಹದಿಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಪೋಷಕರು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ತಂದೆ-ತಾಯಂದಿರಿಗೂ ವಿಶೇಷ ಸಭೆಗಳ ಮೂಲಕ ಕೌನ್ಸಿಲಿಂಗ್ ನೀಡಲು ಸಮಿತಿ ಶಿಫಾರಸು ಮಾಡಿದೆ.



