ಬಂಗಾಳ ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಮಹಿಳೆಯಿಂದ ನ್ಯಾಯ ಕೊಡಿಸುವಂತೆ ರಾಷ್ಟ್ರಪತಿಗೆ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದು, ರಾಜಭವನದ ಮಹಿಳಾ ಸಿಬ್ಬಂದಿ ನ್ಯಾಯ ಕೊಡಿಸುವಂತೆ ರಾಷ್ಟ್ರಪತಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಮಹಿಳೆಯ ಆರೋಪವನ್ನು ಅಲ್ಲಗಳೆದಿದ್ದ ರಾಜ್ಯಪಾಲ ಆನಂದ ಬೋಸ್, ರಾಜಭವನದ ಮುಂಭಾಗದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಯನ್ನು ಸಾರ್ವಜನಿಕರಿಗೆ ಗುರುವಾರ ಬಹಿರಂಗಪಡಿಸಿದ್ದರು.

ಇದೀಗ ಇದರಲ್ಲಿ ತನ್ನ ಗುರುತನ್ನು ಮರೆಮಾಚಿಲ್ಲ. ಇದರಿಂದ ದೌರ್ಜನ್ಯಕ್ಕೊಳಗಾದ ನನ್ನ ಗುರುತು ಬಹಿರಂಗಗೊಳಿಸಿ ಮಾನಹಾನಿ ಮಾಡಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಮಹಿಳೆ ರಾಷ್ಟ್ರಪತಿ ಅವರನ್ನು ಕೋರಿದ್ದಾರೆ.

ಕೋಲ್ಕತ್ತ ಪೊಲೀಸರ ಮೇಲೆ ಹೆಚ್ಚಿನ ಭರವಸೆ ಇಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಹಸ್ತಕ್ಷೇಪದಿಂದಾಗಿ ಪೊಲೀಸರ ಕೈ ಕಟ್ಟಿಹಾಕಿದಂತಾಗಿದೆ. ಈ ಪ್ರಕರಣದಲ್ಲಿ ತಾನು ತೀರಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ರಾಷ್ಟ್ರಪತಿ ಅವರಲ್ಲಿ ನ್ಯಾಯ ಕೋರುವುದೊಂದೇ ಉಳಿದಿರುವ ಮಾರ್ಗ ಎಂದಿದ್ದಾರೆ .

ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೆರವನ್ನು ಕೋರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂತ್ರಸ್ತೆ, ‘ಘಟನೆ ನಡೆದ ದಿನ ಪ್ರಧಾನಿ ಅವರು ರಾಜಭವನದಲ್ಲಿ ಉಳಿಯುವ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆದರೆ ಆ ದಿನ ಒತ್ತಡಕ್ಕೊಳಗಾಗಿ ನಾನು ಪ್ರತಿಭಟಿಸಿದ್ದೆ. ಪ್ರಧಾನಿ ಅವರ ಭದ್ರತಾ ಸಿಬ್ಬಂದಿ ಇದಕ್ಕೆ ಸಾಕ್ಷಿಯಾಗಿದ್ದಾರೆ. ಅವರು ಖಂಡಿತವಾಗಿಯೂ ಪ್ರಧಾನಿಗೆ ಈ ಮಾಹಿತಿ ಮುಟ್ಟಿಸಿರುತ್ತಾರೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಅವರಿಗೆ ಪತ್ರ ಬರೆಯುವುದು ವ್ಯರ್ಥವೆಂದು ತೋರುತ್ತದೆ’ ಎಂದಿದ್ದಾರೆ.

ಕಂಪ್ಯೂಟರ್ ಅಪ್ಲಿಕೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಸಂತ್ರಸ್ತೆ ಸದ್ಯ ತೀವ್ರ ಮಾನಸಿಕ ಒತ್ತಡದಲ್ಲಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಏ. 24 ಹಾಗೂ ಮೇ 2ರಂದು ರಾಜ್ಯಪಾಲ ಬೋಸ್ ನನ್ನ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದಿಂದ ನಾನು ಆಘಾತ ಮತ್ತು ಅವಮಾನಗಳಿಂದ ಜರ್ಜರಿತಳಾಗಿದ್ದೇನೆ. ಮಧ್ಯಮವರ್ಗದ ಕುಟುಂಬದಿಂದ ಬಂದ ನನ್ನ ಬದುಕಿನಲ್ಲಿ ಇಂಥದ್ದೊಂದು ಸ್ಥಿತಿ ಎದುರಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ನನಗೆ ಹಾಗೂ ನನ್ನ ಪಾಲಕರಿಗೆ ಇದೊಂದು ದುಃಸ್ವಪ್ನವಾಗಿದೆ. ಈ ಪರಿಸ್ಥಿತಿಯಿಂದ ನನ್ನನ್ನು ನಾನು ಹೊರಕ್ಕೆ ತರಲು ಮಾನಸಿಕ ತಜ್ಞರ ಭೇಟಿ ಮಾಡಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!