ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂನ ಪ್ರೇಮಂ ಮೊದಲಾದ ಹಿಟ್ ಸಿನೆಮಾಗಳ ನಾಯಕ ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ.
ಸಿನೆಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ನಂಬಿಸಿ ನನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಎರ್ನಾಕುಳಂ ಜಿಲ್ಲೆಯ ನೇರ್ಯಮಂಗಲಂ ನಿವಾಸಿ ಯುವತಿ ಊನ್ನುಕ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಈ ಪ್ರಕರಣ ಎಸ್‌ಐಟಿಗೆ (SIT) ವರ್ಗಾವಣೆಯಾಗಿದೆ. ಹೇಮಾ ಕಮಿಷನ್ ವರದಿ ಬಹಿರಂಗಗೊಂಡ ಬಳಿಕ ತನಿಖೆಗೆ ನೇಮಕಗೊಂಡ ವಿಶೇಷ ತನಿಖಾ ತಂಡ ಈ ಪ್ರಕರಣದ ವಿಚಾರಣೆ ನಡೆಸಲಿದೆ. ವರದಿ ಬಹಿರಂಗವಾದ ಬಳಿಕ ಇದುವರೆಗೆ 11 ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
2023ರ ನವೆಂಬರ್ ತಿಂಗಳಲ್ಲಿ ದುಬೈನ ಹೋಟೆಲೊಂದರಲ್ಲಿ ಈ ಘಟನೆ ನಡೆದಿದೆ. ದೂರು ನೀಡಿದ ಯುವತಿ ಬೇರೆ ಕೆಲಸದ ನಿಮಿತ್ತ ದುಬೈಗೆ ತೆರಳಿದ್ದರು. ಯುವತಿಯ ಸ್ನೇಹಿತೆ ಮೂಲಕ ಈಕೆ ಚಿತ್ರ ತಂಡದ ಬಳಿಗೆ ತೆರಳಿದ್ದರು ಎನ್ನಲಾಗಿದೆ.
ಯುವತಿ ತನ್ನನ್ನು ಕರೆದೊಯ್ದ ಮಹಿಳೆಯನ್ನು ಮೊದಲ ಆರೋಪಿ ಎಂದು ದೂರಿನಲ್ಲಿ ಹೇಳಿದ್ದಾರೆ. ಎಕೆ ಸುನಿಲ್, ಬಿನು, ಬಶೀರ್, ಕುಟ್ಟನ್ ಹಾಗೂ 6ನೇ ಆರೋಪಿ ನಿವಿನ್ ಪೌಲಿ ಎಂದು ದೂರು ದಾಖಲಿಸಿದ್ದಾರೆ.
ಮಾದಕದ್ರವ್ಯ ನೀಡಿ ದೌರ್ಜನ್ಯ ನಡೆಸಿದ್ದಾರೆ. 6 ದಿನಗಳ ಕಾಲ ಹೋಟೆಲ್‌ನಲ್ಲಿ ಕೂಡಿ ಹಾಕಿ ಈ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.