ಹೊಸದಿಗಂತ ವರದಿ ಹಾವೇರಿ:
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.75 ಸಾವಿರ ದಂಡ ವಿಧಿಸಿ ವಿಶೇಷ ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ-1)ದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಹಾನಗಲ್ ತಾಲೂಕು ಸುರಳೇಶ್ವರ ಗ್ರಾಮದ ಸಂಜೀವ ಗುಡ್ಡಪ್ಪ ಮೈಲಾರ ಎಂಬಾತ ಶಿಕ್ಷೆಗೆ ಗುರಿಯಾದವನು. ಈತ ಬಾಲಕಿಯನ್ನು 2020ರ ಫೆ.19ರಂದು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ್ದ. ಅಲ್ಲದೆ ಬಾಲಕಿಗೆ ಜೀವ ಬೆದರಿಕೆ ಹಾಕಿದ ಅಪರಾಧಗಳಿಗಾಗಿ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹಾನಗಲ್ ವೃತ್ತದ ತನಿಖಾಧಿಕಾರಿ ಸಿಪಿಐ ಶಿವಶಂಕರ ಗಣಾಚಾರಿ ಪ್ರಕರಣದ ತನಿಖೆ ನಡೆಸಿ ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿ ಸಂಜೀವ ಗುಡ್ಡಪ್ಪ ಮೈಲಾರದ ಮೇಲೆ ಹೊರಿಸಲಾದ ಆಪಾಧನೆಗಳು ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿನ ಆಪಾದನೆಗಳು ಋಜುವಾತಾಗಿರುತ್ತವೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ನಿಂಗೌಡ ಪಾಟೀಲ ಅವರು, ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.75 ಸಾವಿರ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.
ಅಲ್ಲದೇ ಸದರಿ ದಂಡದ ಹಣದಲ್ಲಿ ನೊಂದ ಬಾಲಕಿಗೆ ರೂ.50,000ಗಳ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರವು ನೊಂದ ಬಾಲಕಿಗೆ ರೂ. 4 ಲಕ್ಷಗಳ ಪರಿಹಾರ ನೀಡಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ ಪಾಟೀಲ್ ವಾದ ಮಂಡಿಸಿದ್ದರು.