ಹೊಸದಿಗಂತ ವರದಿ ಬೆಳಗಾವಿ:
ತಮ್ಮತನ, ಸಮಾಜದಲ್ಲಿನ ತಮ್ಮ ಸ್ವಾಭಿಮಾನ, ಸ್ವಾತಂತ್ರ್ಯದ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ನೂರಾರು ಲೈಂಗಿಕ ಅಲ್ಪಸಂಖ್ಯಾತರು ನಗರದಲ್ಲಿ ಹೆಮ್ಮೆಯ ನಡಿಗೆ ಹಮ್ಮಿಕೊಂಡು ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ಕಿರಣ ಅವರು, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನಮ್ಮನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಹೀಗಾಗಿ ನಮ್ಮ ತನವನ್ನು ತೋರ್ಪಡಿಸಲು ಈ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಳೆದ ವರ್ಷದಿಂದ ಹಮ್ಮಿಕೊಳ್ಳಲಾಗುತ್ತಿರುವ ಈ ಹೆಮ್ಮೆಯ ನಡಿಗೆಗೆ ಈಗ ಎರಡು ವರ್ಷ. ಇದು ನಮ್ಮ ಹೆಮ್ಮೆಯ ನಡಿಗೆ. ನಮ್ಮನ್ನು ಎಲ್ಲರೂ ಸಮಾನತೆಯಿಂದ ಕಾಣಬೇಕೆಂಬುದೇ ನಮ್ಮ ಉದ್ದೇಶ ಎಂದು ಹೇಳಿದರು.
ಈ ಹೆಮ್ಮೆಯ ನಡಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕುಮಾರ್ ಗಂಧರ್ವ ರಂಗ ಮಂದಿರದಲ್ಲಿ ಸಮಾರೋಪಗೊಂಡಿತು. ನಂತರ ಲೈಂಗಿಕ ಅಲ್ಪಸಂಖ್ಯಾತರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.