March 23, 2026
Monday, March 23, 2026
spot_img

ಚುನಾವಣಾ ಕಣದಲ್ಲಿ ಹಿಂಸಾಚಾರದ ನೆರಳು: ಮತ್ತೊಬ್ಬ ಹಿಂದು ಯುವಕನ ಕ್ರೂರ ಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ಉದ್ದೇಶಿತ ದಾಳಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಶೇಖ್ ಹಸೀನಾ ಅವರ ಆಡಳಿತ ಅಂತ್ಯಗೊಂಡ ಬಳಿಕ ನಡೆಯುತ್ತಿರುವ ಈ ಮೊದಲ ಚುನಾವಣೆಯ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿರುವುದು ಆತಂಕಕ್ಕೆ ಕಾರಣವಾಗಿದೆ.

ಮೌಲ್ವಿಬಜಾರ್ ಜಿಲ್ಲೆಯ ಚಹಾ ತೋಟದ ಕಾರ್ಮಿಕರಾದ ರತನ್ ಸಾಹುಕರ್ (28) ಎಂಬುವವರನ್ನು ಬುಧವಾರ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ರತನ್ ಅವರ ಕೈಕಾಲುಗಳನ್ನು ಕಟ್ಟಿ ಹಾಕಿ, ದೇಹದ ಮೇಲೆ ತೀವ್ರವಾದ ಗಾಯಗಳನ್ನು ಮಾಡಲಾಗಿತ್ತು. ಕೆಲಸಕ್ಕೆ ತೆರಳಿದ್ದ ವೇಳೆ ಪತ್ತೆಯಾದ ಇವರ ಶವವನ್ನು ಕಂಡು ಸಹೋದ್ಯೋಗಿಗಳು ಆಘಾತಕ್ಕೊಳಗಾಗಿದ್ದಾರೆ. ಇದು ವ್ಯವಸ್ಥಿತ ಪಿತೂರಿ ಮತ್ತು ಪೂರ್ವನಿಯೋಜಿತ ಕೊಲೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೇವಲ ಕೆಲವು ದಿನಗಳ ಹಿಂದಷ್ಟೇ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಅಕ್ಕಿ ವ್ಯಾಪಾರಿ ಸುಶೇನ್ ಚಂದ್ರ ಸರ್ಕಾರ್ (62) ಎಂಬುವವರನ್ನು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಅವರ ಅಂಗಡಿಯಲ್ಲಿದ್ದ ಹಣವನ್ನು ದೋಚಿದ್ದ ದುಷ್ಕರ್ಮಿಗಳು, ಸುಶೇನ್ ಅವರನ್ನು ರಕ್ತದ ಮಡುವಿನಲ್ಲಿ ಅಂಗಡಿಯೊಳಗೆ ಕೂಡಿ ಹಾಕಿ ಪರಾರಿಯಾಗಿದ್ದರು.

ಪ್ರಸ್ತುತ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಈ ಚುನಾವಣೆ ನಡೆಯುತ್ತಿದೆ. ಇಂದು ಸಂಜೆ 4.30 ರವರೆಗೆ ಮತದಾನ ನಡೆಯಲಿದ್ದು, ಬಳಿಕ ಮತ ಎಣಿಕೆ ಆರಂಭವಾಗಲಿದೆ. ಶಾಂತಿ ಕಾಪಾಡುವಂತೆ ಸರ್ಕಾರ ಮನವಿ ಮಾಡಿದ್ದರೂ, ಅಲ್ಪಸಂಖ್ಯಾತರ ಮೇಲಿನ ಈ ಸರಣಿ ಹತ್ಯೆಗಳು ಪ್ರಜಾಪ್ರಭುತ್ವದ ಹಬ್ಬಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !