ನವರಾತ್ರಿಗೆ ಮುನ್ನ ಶಕ್ತಿಯ ಪೂಜೆ: ತೆಲಂಗಾಣದಲ್ಲಿ 13,500 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದಲ್ಲಿ 13,500 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಮೆಹಬೂಬ್​ನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್​ ಸಮಾವೇಶದಲ್ಲಿ ಭಾಗವಹಿಸಿದ ಅವರು, ರಸ್ತೆ ಅಭಿವೃದ್ಧಿ, ರೈಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉನ್ನತ ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಬಳಿಕ ವಿಡಿಯೋ ಕಾನ್ಫರೆನ್ಸ್​​ ಮೂಲಕ ಹೈದರಾಬಾದ್ (ಕಾಚಿಗುಡ) – ರಾಯಚೂರು – ಹೈದರಾಬಾದ್ (ಕಾಚಿಗುಡ) ರೈಲು ಸೇವೆಗೆ ಕೃಷ್ಣ ರೈಲ್ವೇ ನಿಲ್ದಾಣದಿಂದ ಹಸಿರು ನಿಶಾನೆ ತೋರಿದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸಾಲು ಸಾಲು ಹಬ್ಬಗಳು ಬರಲಿವೆ. ನವರಾತ್ರಿ ಹಬ್ಬವೂ ಪ್ರಾರಂಭವಾಗಲಿದೆ. ಇದಕ್ಕೂ ಮೊದಲೇ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವ ಮೂಲಕ ನಾವು ‘ಶಕ್ತಿ’ಯನ್ನು ಪೂಜಿಸಿದ್ದೇವೆ ಎಂದರು.

ತೆಲಂಗಾಣದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ತೆಲಂಗಾಣವನ್ನು ಅಭಿನಂದಿಸುತ್ತೇನೆ. ರಾಜ್ಯದ ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆಗಳನ್ನು ತರಲಿರುವ ಅನೇಕ ರಸ್ತೆ ಸಂಪರ್ಕ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಪ್ರಮುಖವಾಗಿ ನಾಗ್ಪುರ-ವಿಜಯವಾಡ ಕಾರಿಡಾರ್​ಗೆ ಚಾಲನೆ ನೀಡಲಾಗಿದೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಪ್ರಯಾಣಿಸಲು ಅನುಕೂಲವಾಗಲಿದೆ. ಈ ಮೂರು ರಾಜ್ಯಗಳ ವ್ಯಾಪಾರ, ಪ್ರವಾಸೋದ್ಯಮ ಮತ್ತು ಇತರೆ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಪ್ರಧಾನಿ ಹೇಳಿದರು.

ಮೂರು ರಾಜ್ಯಗಳ ಅಭಿವೃದ್ಧಿಗೆ ಕಾರಿಡಾರ್ ಅತೀ ಅಗತ್ಯ. ಈ ಕಾರಿಡಾರ್ ಅ​ನ್ನು ಆರ್ಥಿಕ ಕೇಂದ್ರಗಳಾಗಿ ಗುರುತಿಸಲಾಗುತ್ತದೆ. ಒಂದು ವಿಶೇಷ ಆರ್ಥಿಕ ವಲಯ, ಐದು ಮೆಗಾ ಫುಡ್ ಪಾರ್ಕ್‌ಗಳು, ನಾಲ್ಕು ಮೀನುಗಾರಿಕೆ ಮತ್ತು ಸಮುದ್ರ ಆಹಾರ ಕ್ಲಸ್ಟರ್‌ಗಳು, ಮೂರು ಫಾರ್ಮಾ ಮತ್ತು ವೈದ್ಯಕೀಯ ಕ್ಲಸ್ಟರ್‌ಗಳು ಹಾಗೂ ಒಂದು ಜವಳಿ ಕ್ಲಸ್ಟರ್ ಕೂಡ ಇಲ್ಲಿ ಇರಲಿದೆ ಎಂದು ತಿಳಿಸಿದರು.

ಭಾರತವು ಅರಿಶಿನದ ಪ್ರಮುಖ ಉತ್ಪಾದಕ ಮತ್ತು ರಫ್ತುದಾರ ದೇಶ. ತೆಲಂಗಾಣದ ರೈತರು ಹೆಚ್ಚಿನ ಪ್ರಮಾಣದಲ್ಲಿ ಅರಿಶಿನ ಬೆಳೆಯುತ್ತಾರೆ. ಕೋವಿಡ್ ನಂತರ ಅರಿಶಿನದ ಬಗ್ಗೆ ಜಾಗೃತಿ ಹೆಚ್ಚಾಗಿದೆ ಮತ್ತು ಜಾಗತಿಕ ಬೇಡಿಕೆಯೂ ಹೆಚ್ಚಿದೆ. ಅರಿಶಿನ ಬೆಳೆಯುವ ರೈತರ ಅಗತ್ಯತೆ ಮತ್ತು ಭವಿಷ್ಯದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪಿಸಲು ನಿರ್ಧರಿಸಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!