-ವೆಂಕಟೇಶ ದೇಸಾಯಿ
ವಿಶ್ವ ಪ್ರಸಿದ್ಧ ಹಂಪಿ ವೀಕ್ಷಣೆಗೆ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆಗಳಿಂದ ಪ್ರವಾಸಿಗರ ದಂಡೇ ಭಾನುವಾರ ಹರಿದು ಬಂದಿತ್ತು. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಕಂಡು ಬಂತು.
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಹಿನ್ನೆಲೆ ಹಂಪಿ ವೀಕ್ಷಣೆಗೆ ರಾಜ್ಯದ ನಾನಾ ಮೂಲೆಗಳಿಂದ ಪ್ರವಾಸಿಗರ ದಂಡು ಹರಿದು ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಭಕ್ತಿಯಲ್ಲಿ ಮಿಂದೆದ್ದ ಪ್ರವಾಸಿಗರು:
ಭಾನುವಾರ ಅದರಲ್ಲೂ ವಿಶೇಷವಾಗಿ ಮಣ್ಣೆತ್ತಿನ ಅಮವಾಸ್ಯೆ ಹಿನ್ನೆಲೆ ಹಂಪಿಗೆ ನಿರೀಕ್ಷೆಗೂ ಮೀರಿ ಪ್ರವಾಸಿಗರು ಆಗಮಿಸಿ, ಹಂಪಿ ಸ್ಮಾರಕಗಳನ್ನು ವೀಕ್ಷಿಸಿದರು. ವಿರೂಪಾಕ್ಷೇಶ್ವರ ದರ್ಶನ, ಸಾಸಿವೆಕಾಳು ಗಣೇಶ, ಕಡಲೆಕಾಳು ಗಣೇಶ ಮಂಟಪ, ಉಗ್ರ ನರಸಿಂಹ, ಎದುರು ಬಸವಣ್ಣ, ಉದ್ದಾನ ವೀರಭದ್ರಸ್ವಾಮಿ, ಸೇರಿದಂತೆ ಹಂಪಿಯ ವಿವಿಧ ಸ್ಮಾರಕಗಳನ್ನು ವೀಕ್ಷಿಸಿದರು. ಹಂಪಿಗೆ ಹೆಚ್ಚು ಪ್ರವಾಸಿಗರು ಹರಿದು ಬಂದ ಹಿನ್ನೆಲೆಯಲ್ಲಿ ಪೊಲೀಸರು ನದಿ ತೀರದಲ್ಲಿ ಬಂದೋಬಸ್ತ್ ಕಲ್ಪಿಸಿದ್ದರು.
ಜನವೋ ಜನ:
ಮಹಿಳೆಯರಿಗೆ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ ಹಿನ್ನೆಲೆಯಲ್ಲಿ ಹೊಸಪೇಟೆ ಕೇಂದ್ರ ಬಸ್ ನಿಲ್ದಾಣ ಭಾನುವಾರ ಜನರಿಂದ ತುಂಬಿ ತುಳುಕುತ್ತಿತ್ತು. ಹೊಸಪೇಟೆಯಿಂದ ಯಾವುದೇ ಭಾಗಕ್ಕೆ ತೆರಳಲು ಮುಂದಾದರೆ, ನಿಲ್ದಾಣಕ್ಕೆ ಆಗಮಿಸುವ ಬಹುತೇಕ ಎಲ್ಲ ಬಸ್ ಗಳು ಫುಲ್ ಆಗಿದ್ದವು. ಅದರಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಹೊಸಪೇಟೆಯಿಂದ ಹಂಪಿಗೆ ತೆರಳಲು ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿದ್ದರೂ ಎಲ್ಲ ಬಸ್ ಗಳು ಭರ್ತಿಯಾಗುತ್ತಿದ್ದವು. ಪ್ರಯಾಣಿಕರು ಸೀಟ್ಗಾಗಿ ನಾ ಮುಂದು, ತಾ ಮುಂದು ಎಂದು ಪರದಾಡುವ ದೃಶ್ಯ ಕಂಡು ಬಂತು.
ಹುಲಿಗಿ ಕ್ಷೇತ್ರಕ್ಕೆ ಭೇಟಿ:
ಹೊಸಪೇಟೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಂಪಿಗೆಗೆ ತೆರಳುವ ಬಸ್ ಮಾತ್ರ ಭರ್ತಿಯಾಗಿರಲಿಲ್ಲ, ಪ್ರಸಿದ್ಧ ಹುಲಿಗಿ ಕ್ಷೇತ್ರಕ್ಕೆ ತೆರಳುವ ಬಸ್ಗಳು ಭಿನ್ನವಾಗಿರಲಿಲ್ಲ. ಹಂಪಿಗೆ ಭೇಟಿ ನೀಡಿದ ಬಹುತೇಕ ಪ್ರವಾಸಿಗರು ಹುಲಿಗೆಮ್ಮ ದೇವಿ ದರ್ಶನಕ್ಕೆ ತೆರಳಿದರು. ಪ್ರವಾಸಿಗರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಹಂಪಿಗೆ ಹಾಗೂ ಹುಲಿಗೆ ತೆರಳುವ ಪ್ರಯಾಣಿಕರಿಗೆ ಸರದಿ ಸಾಲು ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನ ಪ್ರವಾಸಿಗರು ನಿಲ್ದಾಣದಲ್ಲಿ ಸಾಲುಗಟ್ಟಿದ್ದರು.