ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಇಂದು ಪ್ರಕಟಿಸಲಾಗಿದೆ.
ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಈ ತಿಂಗಳ ಕೊನೆಯಲ್ಲಿ ನಡೆಯಲ್ಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಸ್ಟಾರ್ ವೇಗಿ ಮೊಹಮ್ಮದ್ ಶಮಿಗೆ ತಂಡದಲ್ಲಿ ಸ್ಥಾನ ನೀಡುವ ಮೂಲಕ ಆಯ್ಕೆ ಸಮಿತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಆಟದಿಂದ ಹೊರಗುಳಿದಿದ್ದ ಶಮಿ ಟಿ20 ಕ್ರಿಕೆಟ್‌ನಿಂದ ತಂಡಕ್ಕೆ ಮರಳುತ್ತಿದ್ದಾರೆ.
ಶಮಿಗೆ ಟಿ20 ತಂಡದಲ್ಲಿ ಸ್ಥಾನ
ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಇಂದು ನಡೆದ ಆಯ್ಕೆ ಸಮಿತಿಯ ಸಭೆಯ ಬಳಿಕ ತಂಡವನ್ನು ಪ್ರಕಟಿಸಲಾಗಿದೆ. ಆಯ್ಕೆಯಾಗಿರುವ ತಂಡದಲ್ಲಿ ಈ ಮೊದಲೇ ನಿರೀಕ್ಷಿಸಿದ್ದ ಹೆಸರುಗಳಿದ್ದು, ಅಚ್ಚರಿಯೆಂಬಂತೆ ಮೊಹಮ್ಮದ್ ಶಮಿಗೆ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ. ವಾಸ್ತವವಾಗಿ ಶಮಿ 2023ರ ವಿಶ್ವಕಪ್ ಬಳಿಕ ಇಂಜುರಿಯಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಆಶ್ಚರ್ಯಕರ ಸಂಗತಿಯೆಂದರೆ 2022 ರ ಟಿ20 ವಿಶ್ವಕಪ್ ನಂತರ ಶಮಿ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ. ಹೀಗಾಗಿ ಶಮಿಯನ್ನು ಟಿ20 ತಂಡಕ್ಕೆ ಆಯ್ಕೆ ಮಾಡುವ ಕಲ್ಪನೆ ಇರಲಿಲ್ಲ.
ಉಪನಾಯಕತ್ವದ ಜವಬ್ದಾರಿಯನ್ನು ಆಲ್ರೌಂಡರ್ ಅಕ್ಷರ್ ಪಟೇಲ್ಗೆ ವಹಿಸಲಾಗಿದೆ. ಉಳಿದಂತೆ ನವೆಂಬರ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡದ ಭಾಗವಾಗಿದ್ದ ಬಹುತೇಕ ಆಟಗಾರರು ಈ ಸರಣಿಗೆ ಆಯ್ಕೆಯಾಗಿದ್ದಾರೆ. ಇವರಲ್ಲದೆ, ನಿತೀಶ್ ಕುಮಾರ್ ರೆಡ್ಡಿ, ಧ್ರುವ್ ಜುರೆಲ್ ಮತ್ತು ಹರ್ಷಿತ್ ರಾಣಾ ಕೂಡ ತಂಡಕ್ಕೆ ಮರಳಿದ್ದಾರೆ.
ಮತ್ತೊಂದೆಡೆ, ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಇಬ್ಬರು ಪ್ರಮುಖ ಆಟಗಾರರಾದ ರಿಷಬ್ ಪಂತ್ ಮತ್ತು ಶಿವಂ ದುಬೆ ಅವರಿಗೆ ಈ ಸರಣಿಯಲ್ಲಿ ಆಯ್ಕೆ ಸಮಿತಿ ಅವಕಾಶ ನೀಡಿಲ್ಲ. ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆಯೇ ಅಥವಾ ತಂಡದಿಂದ ಕೈಬಿಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ದುಬೆ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರೆ, ಇತ್ತ ತನ್ನ ನಾಯಕತ್ವದಲ್ಲಿ ಮುಂಬೈ ತಂಡವನ್ನು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಚಾಂಪಿಯನ್ ಮಾಡಿದ್ದ ಶ್ರೇಯಸ್ ಅಯ್ಯರ್ ಕೂಡ ಟಿ20 ತಂಡದಲ್ಲಿ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ.
ಟಿ20 ಸರಣಿಗೆ ಭಾರತ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).