Sunday, December 3, 2023

Latest Posts

ಶರಣ ಸಂಸ್ಕೃತಿ ಉತ್ಸವ-2023 ಮಹಿಳಾ ಸಮಾವೇಶ

ಹೊಸದಿಗಂತ ವರದಿ,ಚಿತ್ರದುರ್ಗ:
ಮಹಿಳೆಯರಿಗೆ ೧೨ನೇ ಶತಮಾನ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು. ಅದರ ಮುಂದುವರಿದ ಭಾಗವಾಗಿ ೨೧ನೇ ಶಮಾನದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಹಾಗೂ ಶ್ರೀ ಮುರುಘಾಮಠದ ಆಡಳಿತಾಧಿಕಾರಿ ಬಿ.ಎಸ್.ರೇಖಾ ಅಭಿಪ್ರಾಯಪಟ್ಟರು.

ಶರಣ ಸಂಸ್ಕೃತಿ ಉತ್ಸವ-೨೦೨೩ರ ಅಂಗವಾಗಿ ಮುರುಘಾಮಠದಲ್ಲಿ ’ವಚನಕಾರ್ತಿಯರ ಅರಿವಿನ ನೆಲೆಗಳು’ ವಿಷಯ ಕುರಿತು ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ಎಲ್ಲ ಕೆಲಸದಲ್ಲೂ ಮುಂದೆ. ಮನೆಯ ಎಲ್ಲ ಜವಾಬ್ದಾರಿ ಮಹಿಳೆಯರದ್ದಾಗಿರುತ್ತದೆ. ಮಕ್ಕಳನ್ನು ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಅವಳದ್ದು. ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ನಮ್ಮ ಸಿಬ್ಬಂದಿಯವರಿಗೆ ವೇತನ ಹೆಚ್ಚು ಮಾಡಿದ್ದು, ನಮ್ಮ ಜವಾಬ್ದಾರಿಯಾಗಿತ್ತು. ಮಠದ ಕಾರ್ಯ ನಿರ್ವಹಣಾಧಿಕಾರಿ ಭರತ್‌ಕುಮಾರ್ ಎಂ. ಹಾಗೂ ವಿಜಯ ಕೆ. ಮಠ ಅವರು ನನ್ನ ಕಾರ್ಯ ಯೋಜನೆಗೆ ತಕ್ಕಂತೆ ಸಹಕಾರಿಯಾಗಿದ್ದಾರೆ. ನಮ್ಮದು ಶರಣರ ಶರಣ ಸಂಸ್ಕೃತಿ. ಸಾರ್ವಜನಿಕರ ಹಣ ಸಾರ್ವಜನಿಕರಿಗೆ ಮೀಸಲು. ಸ್ವಂತಕ್ಕೆ ಯಾರೂ ಖರ್ಚು ಮಾಡಿಕೊಳ್ಳಬಾರದು. ಆಡಳಿತಾಧಿಕಾರಿಯಾಗಿ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಸೇವೆಯನ್ನು ಮಾಡುತ್ತೇನೆ. ನಮ್ಮ ಸಮಾಜದವರು ಸಹಕಾರ ನೀಡಬೇಕೆಂದು ಕೋರಿದರು.
ಲೈಂಗಿಕ ಅಲ್ಪಸಂಖ್ಯಾತರ ಪರ ಹಕ್ಕುಗಳ ಹೋರಾಟಗಾರ್ತಿ ಡಾ.ಅಕ್ಕೈ ಪದ್ಮಶಾಲಿ ಮಾತನಾಡಿ, ಲಿಂಗತ್ವದ ಆಧಾರದ ಮೇಲೆ ಈ ಸಮಾಜದಲ್ಲಿ ಶೋಷಣೆ ಅನುಭವಿಸುತ್ತಿರುವ ನಮ್ಮಂಥವರನ್ನು ನ್ಯಾಯಾಧೀಶರಾದ ರೇಖಾ ಮೇಡಂ ಗುರುತಿಸಿ ಸನ್ಮಾನಿಸುತ್ತಿರುವುದು ನಮ್ಮಗಳಿಗೆ ಸಂದ ಗೌರವವಾಗಿದೆ. ಸಾಂಸ್ಕೃತಿಕ ಚೌಕಟ್ಟಿನಿಂದ ನಮ್ಮನ್ನು ದೂರವಿಟ್ಟಿದ್ದಾರೆ. ನಮ್ಮಗಳದು ನಿಷ್ಕಲ್ಮಷವಾದ ಮನಸ್ಸು. ನಾವುಗಳು ಶೋಷಿತ ಸಮಾಜಕ್ಕೆ ಸೇರಿದವರು. ಮಹಿಳೆಯರನ್ನು ಶೋಷಿತ ರೂಪದಲ್ಲಿ ನೋಡುವ ಸಮಾಜಕ್ಕೆ ನನ್ನದೊಂದು ಧಿಕ್ಕಾರವಿದೆ. ಸಮಾಜದಲ್ಲಿ ಶೋಷಿತರ ಸುಧಾರಣೆ ತರುವಲ್ಲಿ ಶ್ರಮಿಸುತ್ತೇವೆ ಎಂದು ನುಡಿದರು.

ಚಿಂತಕರಾದ ಡಾ.ಶುಭಾ ಮರವಂತೆ ವಿಷಯಾವಲೋಕನ ಮಾಡಿ ಮಾತನಾಡಿ, ನಮ್ಮ ಕೈಗಳು ಎರಡಲ್ಲ. ಅನೇಕ ಕೈಗಳು ಇವೆ. ಇಡೀ ಸಂಸಾರದ ಹೊಣೆ ನಮ್ಮದು. ಜಗತ್ತಿನಲ್ಲಿ ಸುಂದರ ಯುಗ ಅಂತ ಇದ್ದರೆ ಅದು ವಚನದ ಯುಗ. ಕಾರಣ ಅಂದು ಹೆಣ್ಣಿಗೆ ಸಮಾನತೆಯ ಅವಕಾಶ ಕೊಟ್ಟರು. ಬಲೆಯನ್ನು ಬಿಚ್ಚಿ ಸಮಾಜಕ್ಕೆ ತೋರಿಸಿದ ಯುಗ ಬಸವಾದಿ ಪ್ರಮಥರದು. ಹೊಸ ಬಗೆಯ ಕ್ರಾಂತಿಯನ್ನು ಮಾಡುತ್ತಿದ್ದೇವೆ. ನನ್ನನ್ನಾರೂ ಅರಿಯರು ಎಂಬ ವಚನಕಾರ್ತಿಯರ ವಚನವನ್ನು ನೋಡಬೇಕು. ಎಲ್ಲಿ ಸ್ತ್ರೀ ಶಕ್ತಿ ತುಂಬಿರುತ್ತದೆಯೋ ಅಲ್ಲೆಲ್ಲಾ ನವರಾತ್ರಿ ಇದ್ದಂತೆ ಎಂದರು.
  ವೈದ್ಯರಾದ ಡಾ.ಜಿ.ಬಿ.ಶಿಲ್ಪಾ ಮಾತನಾಡಿ, ಹೆಣ್ಣಿನ ಹದಿಹರೆಯದೆ ಸಮಸ್ಯೆಗಳನ್ನು ಗುರುತಿಸುವುದು ತಾಯಿ. ಬಂಜೆತನವು ಈಗ ಹೆಚ್ಚಾದ ವಿಷಯವಾಗಿದೆ. ಇದರಲ್ಲಿ ಪುರುಷ ಮಹಿಳೆ ಎಂಬ ಭೇದಭಾವ ಹೆಚ್ಚಾಗಿದೆ. ಹೆಣ್ಣು ಮತ್ತು ಗಂಡು ಎಂಬ ಲಿಂಗಬೇದ ಹೆಚ್ಚಾಗಿರುವುದರಿಂದ ಸಮಾಜದಲ್ಲಿ ಅಸಮಾನತೆ ಹೆಚ್ಚಾಗಿದೆ. ಲಿಂಗ ತಾರತಮ್ಯವನ್ನು ಹೋಗಲಾಡಿಸಲಾದರೆ ಮಾತ್ರ ಅಭಿವೃದ್ದಿ ಕಾಣಲು ಸಾಧ್ಯ ಎಂದು ತಿಳಿಸಿದರು.
ಅ.ಭಾ.ವಿ.ಮ. ಮಹಿಳಾ ಉದ್ಯಮಿಗಳ ಘಟಕದ ಅಧ್ಯಕ್ಷರಾದ ಕೆ.ಸಿ.ವೀಣಾ ಸುರೇಶ್‌ಬಾಬು, ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿ ಉತ್ಸವ-೨೦೨೩ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಬಸವತತ್ತ್ವ ಪ್ರಸಾರಕರಾದ ಬೀದರ್‌ನ ಶರಣೆ ಸತ್ಯಕ್ಕ, ಎಸ್.ಜೆ.ಎಂ. ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಭರತ್‌ಕುಮಾರ್, ಶರಣ ಸಂಸ್ಕೃತಿ ಉತ್ಸವ-೨೦೨೩ರ ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್, ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ, ಮಾಯಾ ಎಸ್. ನಾಯಕ್, ಅಜೀದಾ ಬೇಗಂ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!