ಹೊಸ ದಿಗಂತ ವರದಿ, ಚಿತ್ರದುರ್ಗ:
ಅನೇಕ ಭಾಷ ಸಾಹಿತ್ಯಗಳಲ್ಲಿ ಕನ್ನಡ ವಿಶ್ವ ಸಾಹಿತ್ಯದಲ್ಲೇ ಉನ್ನತ ಸ್ಥಾನ ಹೊಂದಿದೆ. ಅಂತಹ ಸಾಹಿತ್ಯ ನೀಡಿದ ಮಹಾನ್ ವ್ಯಕ್ತಿಗಳೆಂದರೆ ಬಸವಾದಿ ಶರಣರು. ಈ ಶರಣ ಸಾಹಿತ್ಯವು ಜನರ ಮನದಾಳ ಮುಟ್ಟಬೇಕು ಎಂದು ಡಂಬಳ-ಗದಗ ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಮುರುಘಾಮಠದಲ್ಲಿ ಹಮ್ಮಿಕೊಂಡಿರುವ ೧೩ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಾದಿ ಶರಣರ ಅಶಯವೆಂದರೆ ಬಸವಾದಿ ಸಾಹಿತ್ಯಿಕ ಮೌಲ್ಯಗಳು ಬೆಳೆದು ಮೌಢ್ಯಾಚರಣೆಗಳು ದೂರವಾಗಬೇಕೆಂದು ಶರಣ ಸಾಹಿತ್ಯ ಸ್ಥಾಪಿಸಿದರು. ಜೊತೆಗೆ ಶೋಷಣೆಯು ನಿರ್ಮೂಲವಾಗಬೇಕೆಂದು ಶರಣರು ಸಾಹಿತ್ಯಗಳನ್ನು ರಚಿಸಿದ್ದಾರೆ ಎಂದರು.
ಸಮ್ಮೇಳನಾಧ್ಯಕ್ಷ ಡಾ.ಸಿದ್ದರಾಮ ಬೆಲ್ದಾಳ ಶರಣರು ಮಾತನಾಡಿ, ಶರಣ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಶರಣ ಸಾಹಿತ್ಯ ಸ್ವತಂತ್ರ ಸಾಹಿತ್ಯ. ಬಸವಾದಿ ಶರಣರ ವಚನ ಸಾಹಿತ್ಯ ಸ್ವತಂತ್ರವಾದದ್ದಾಗಿದೆ. ಮನುಷ್ಯನ ಒಳಗಿನ ಆತ್ಮವನ್ನು ಎಚ್ಚರಿಸುವಂತಹ ಶಕ್ತಿ ಶರಣ ಸಾಹಿತ್ಯ. ವೇದ, ಉಪನಿಷತ್ತು, ಷಟ್ ಸ್ಥಳಗಳಲ್ಲಿ ಇರದಂತಹ ವೈಶಿಷ್ಟತೆ ಶರಣ ಸಾಹಿತ್ಯದಲ್ಲಿದೆ. ಇಂತಹ ಸಾಹಿತ್ಯವು ಮುಂದಿನ ದಿನಗಳಲ್ಲಿ ಹೆಚ್ಚಿನದಾಗಿ ಶರಣ ಸಾಹಿತ್ಯ ಸಮ್ಮೇಳನಗಳ ಮುಖಾಂತರ ಹೆಚ್ಚು ಪ್ರಚಾರವಾಗಲಿ ಎಂದು ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಕಳೆದ ನಾಲ್ಕೈದು ದಶಕಗಳಿಂದ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಈ ನಾಡಿನ ಮೂಲೆ ಮೂಲೆಗಳಿಗೆ ಬಸವಾದಿ ಶರಣರ ತತ್ತ್ವಗಳನ್ನು ಮುಟ್ಟಿಸಿದವರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು. ಇಂದು ಅನೇಕ ಕಡೆ ಬಸವಾದಿ ಶರಣರ ಗದ್ದುಗೆಗಳು ಸುಸ್ಥಿಯಲ್ಲಿಲ್ಲ. ಗದ್ದುಗೆಗಳ ಅಭಿವೃದ್ಧಿಗಾಗಿ ಮುಂಬರುವ ರಾಜ್ಯ ಬಜಟ್‌ನಲ್ಲಿ ಅನುದಾನ ಮೀಸಲಿಡುವಂತೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು ಎಂದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು, ಬಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು, ಹಿರಿಯ ಸಾಹಿತಿ ಡಾ.ಎಸ್.ಆರ್.ಗುಂಜಾಳ ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ.ಸೋಮಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸುತ್ತೂರು ಮಹಾಸಂಸ್ಥಾನಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಇಮ್ಮಡಿ ಸಿದ್ಧರಾಮ ಸ್ವಾಮೀಜಿ, ಸದ್ಗುರು ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಮುರುಘಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನಾಡೋಜ ಗೊ.ರ.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಕಳಸದ, ಸದಸ್ಯ ಎಸ್.ಎನ್.ಚಂದ್ರಶೇಖರ್, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನುಭವ ಸಂಗಮ-ಸ್ಮರಣ ಸಂಚಿಕೆ, ಶರಣ ದರ್ಶನ ಹಾಗೂ ಶರಣ ಮೇದಾರ ಕೇತಯ್ಯ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಡಾ.ರೂಪ ನಿರೂಪಿಸಿ, ಡಾ.ಕೆ.ಎಂ.ವೀರೇಶ್ ಸ್ವಾಗತಿಸಿದರು.