April 26, 2026
Sunday, April 26, 2026
spot_img

ಕೊನೆಗೂ ಪತ್ತೆಯಾದ ಶರಣ್ಯ: ನಾಲ್ಕು ದಿನಗಳ ಶೋಧ ಕಾರ್ಯ ಸುಖಾಂತ್ಯ

ಹೊಸದಿಗಂತ ವರದಿ ಮಡಿಕೇರಿ:

ಕಕ್ಕಬ್ಬೆಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳದ ಕೊಯಿಕ್ಕೋಡು ನಾದಾಪುರಂ ನಿವಾಸಿ ಶರಣ್ಯ (36) ನಾಪತ್ತೆ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ.

ಭಾನುವಾರ ಸಂಜೆ ಸ್ಥಳೀಯ ಕುಡಿಯ ಸಮುದಾಯದ ತಂಡ ನಡೆಸಿದ ಶೋಧ ಕಾರ್ಯ ಸಂದರ್ಭ ಆಕೆ ಪತ್ತೆಯಾಗಿದ್ದು, ಸತತ ನಾಲ್ಕು ದಿನಗಳ ಶೋಧ ಕಾರ್ಯ ಫಲ ನೀಡಿದೆ. ಕೊಡಗಿಗೆ ಒಂಟಿಯಾಗಿ ಆಗಮಿಸಿ ಕಕ್ಕಬ್ಬೆಯ ಹೋಂಸ್ಟೇಯೊಂದರಲ್ಲಿ ವಾಸ್ತವ್ಯ ಹೂಡಿದ್ದ ಶರಣ್ಯ, ಏ.2ರಂದು ಅಲ್ಲಿನ ತಡಿಯಂಡಮೋಳ್‌ ಬೆಟ್ಟಕ್ಕೆ ಚಾರಣ ತೆರಳಿ ಬಳಿಕ ನಾಪತ್ತೆಯಾಗಿದ್ದರು.

ಆಕೆಯ ಪತ್ತೆಗಾಗಿ ಕಳೆದ ಮೂರು ದಿನಗಳಿಂದ ಸ್ಥಳೀಯರು, ಪೊಲೀಸ್, ಅರಣ್ಯ ಇಲಾಖೆ, ಶ್ವಾನದಳ, ಥರ್ಮಲ್ ಹಾಗೂ ಸಾಮಾನ್ಯ ಡ್ರೋನ್ ಬಳಸಿ ಶೋಧ ಕಾರ್ಯಾಚರಣೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಭಾನುವಾರ ನಕ್ಸಲ್ ನಿಗ್ರಹ ಪಡೆಯ ಎರಡು ತಂಡ, ವಿವಿಧ ವಲಯಗಳ ಐದು ಅರಣ್ಯ ಇಲಾಖೆ ಸಿಬ್ಬಂದಿಗಳ ತಂಡ, ಸ್ಥಳೀಯ ಆದಿವಾಸಿ ಜನಾಂಗದ 15 ಮಂದಿಯ ತಂಡ ಶೋಧ ನಡೆಸಿದ್ದು, ಸಂಜೆ ವೇಳೆಗೆ ಅಲ್ಲಿ‌ನ ಕುಡಿಯ ಸಮುದಾಯದ ತಂಡಕ್ಕೆ ಕಾಡಿನೊಳಗೆ ನಿತ್ರಾಣಗೊಂಡ ಸ್ಥಿತಿಯಲ್ಲಿ ಶರಣ್ಯ ಕಂಡು ಬಂದಿದ್ದಾಳೆ.

ಇದನ್ನೂ ಓದಿ:

ಕಾಡಿನಲ್ಲಿ ದಾರಿ ತಪ್ಪಿದ ಪರಿಣಾಮ ಹಾಗೂ ಮೊಬೈಲ್ ಬ್ಯಾಟರಿ ಚಾರ್ಜ್ ಇಲ್ಲದ್ದರಿಂದ ಮೊಬೈಲ್ ಸಂಪರ್ಕ ಸಾಧ್ಯವಾಗದೆ ಆಕೆ ಕಾಡಿನಲ್ಲೇ ಸಿಲುಕುವಂತಾಗಿತ್ತು ಎನ್ನಲಾಗಿದೆ. ಆಕೆಯನ್ನು ಪೊಲೀಸರು ಹಾಗೂ ಸ್ಥಳೀಯರು ಕಾಡಿನೊಳಗಿಂದ ಕರೆತರುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಶನಿವಾರ ಕುಡಿಯ ಸಮುದಾಯದ ಹಿರಿಯರು ಶರಣ್ಯ ಜೀವಂತವಾಗಿ, ಸುರಕ್ಷಿತವಾಗಿ ಪತ್ತೆಯಾಗುವಂತಾಗಲಿ ಎಂದು ತಮ್ಮ ಕುಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಶರಣ್ಯ ಪತ್ತೆಗಾಗಿ 4 ದಿನಗಳಿಂದ ಆವಿರತ ಶ್ರಮಿಸಿದ ಪೊಲೀಸ್‌, ಅರಣ್ಯ ಇಲಾಖೆ, ಗ್ರಾಮಸ್ಥರು ಮತ್ತು ಆಧುನಿಕ ಉಪಕರಣ ನೀಡಿದ ರಾಜ್ಯ ಸರ್ಕಾರಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕೃತಜ್ಞತೆ ಸಲ್ಲಿಸುವುದರೊಂದಿಗೆ ಆಕೆಯ ಆರೋಗ್ಯ ವಿಚಾರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !