ಹೊಸದಿಗಂತ ವರದಿ, ಕಾಸರಗೋಡು
ಕಾಞಂಗಾಡು ಚೆಮ್ಮಟಂವಯಲ್ ನಲ್ಲಿರುವ ಕಾಸರಗೋಡು ಜಿಲ್ಲಾಸ್ಪತ್ರೆಯ ಒಳಗಿನ ತಿಂಡಿ ತಿನಿಸು ಸ್ಟಾಲ್ ನಿಂದ ಖರೀದಿಸಿದ ಉದ್ದಿನ ವಡೆಯಲ್ಲಿ ಹುಳ ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ರೋಗಿಯ ಜೊತೆಯಲ್ಲಿದ್ದವರು ಸೇವಿಸಲು ಖರೀದಿಸಿದ ವಡೆಯೊಳಗೆ ಸತ್ತ ಹುಳ ಪತ್ತೆಯಾಗಿದೆ.
ಹೊರರಾಜ್ಯದ ಕಾರ್ಮಿಕರು ಮನೆಯಲ್ಲಿ ತಯಾರಿಸಿದ ತಿಂಡಿ ತಿನಸುಗಳನ್ನು ಈ ಸ್ಟಾಲ್ ನಲ್ಲಿ ಮಾರಾಟ ಮಾಡಲಾಗುತ್ತದೆ. ಘಟನೆ ಗಮನಕ್ಕೆ ಬಂದ ನಂತರ ಆಸ್ಪತ್ರೆಯ ಅಧಿಕಾರಿಗಳು ಸ್ಟಾಲ್ ನ್ನು ಬಂದ್ ಮಾಡಿದ್ದಾರೆ. ಆಹಾರ ಸುರಕ್ಷಾ ಇಲಾಖೆ ಕೂಡ ಮಿಂಚಿನ ತಪಾಸಣೆ ನಡೆಸಿದೆ. ಈ ಜಿಲ್ಲಾಸ್ಪತ್ರೆಯಲ್ಲಿ ಮಧ್ಯಾಹ್ನದ ಊಟ ಸೇರಿದಂತೆ ಕ್ಯಾಂಟೀನ್ ನ ವ್ಯವಸ್ಥೆಯಿಲ್ಲ. ಅದಕ್ಕಾಗಿಯೇ ಸ್ಟಾಫ್ ಕೌನ್ಸಿಲ್ ನೇತೃತ್ವದಲ್ಲಿ ತಿಂಡಿ ತಿನಿಸುಗಳ ಸ್ಟಾಲ್ ಸ್ಥಾಪಿಸಲಾಗಿದೆ.
ಈ ಮಧ್ಯೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಜಿಲ್ಲೆಯ ಚೆರ್ವತ್ತೂರಿನ ಐಡಿಯಲ್ ಕೂಲ್ ಪಾಯಿಂಟ್ ನಲ್ಲಿ ಚಿಕನ್ ಶವರ್ಮ ಸೇವಿಸಿದ ವಿದ್ಯಾರ್ಥಿನಿಯೊಬ್ಬರು ವಿಷಾಹಾರಕ್ಕೆ ಕಾರಣವಾಗಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಕೇರಳದ ವಿವಿಧೆಡೆ ವಿಷಾಹಾರ ಘಟನೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ತಪಾಸಣೆಯನ್ನು ಬಿಗಿಗೊಳಿಸಿದೆ. ಅದರಂತೆ ತಪಾಸಣೆ ವೇಳೆ ಚೆರ್ವತ್ತೂರು ಕೂಲ್ ಪಾಯಿಂಟ್ ನಲ್ಲಿ ಹಳಸಿದ ಎಣ್ಣೆ ಇತ್ಯಾದಿಗಳಲ್ಲಿ ಚಿಕನ್ ಶವರ್ಮ ತಯಾರಿಸಿರುವುದು ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ