ಹೊಸದಿಗಂತ ವರದಿ, ಚಿತ್ರದುರ್ಗ :
ರಸ್ತೆಯಲ್ಲಿ ಬರುತ್ತಿದ್ದ ಕುರಿ ಮಂದೆಯ ಮೇಲೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸೊಂದು ಹರಿದ ಪರಿಣಾಮ ಓರ್ವ ಕುರಿಗಾಯಿ ಸ್ಥಳದಲ್ಲೇ ಮೃತಪಟ್ಟು, ೨೦ ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಈರಜ್ಜನಹಟ್ಟಿ ಗೇಟ್ ಬಳಿ ಸೋಮವಾರ ನಸುಕಿನಲ್ಲಿ ನಡೆದಿದೆ.
ಚಿತ್ರದುರ್ಗದಿಂದ ಹೊರಟ ಬಸ್ ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ಕುರಿ ಮಂದೆಯ ಮೇಲೆ ಬಸ್ ಹರಿದಿದೆ. ಇದರಿಂದಾಗಿ ಕುರಿಗಾಯಿ ರಾಜಪ್ಪ (೩೦) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಕುರಿಗಾಯಿ ತಿಪ್ಪಣ್ಣ ಗಂಭೀರವಾಗಿ ಗಾಯಗೊಂಡಿದ್ದು, ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಳ್ಳಕೆರೆ ತಾಲ್ಲೂಕಿನ ನೆಲಗೇತನಹಟ್ಟಿ ಗ್ರಾಮದ ರಾಜಪ್ಪ ಹಾಗೂ ತಿಪ್ಪಣ್ಣ ಎಂಬ ಕುರಿಗಾಯಿಗಳು ಬರದ ಹಿನ್ನೆಲೆಯಲ್ಲಿ ಮೇವನ್ನರಸಿ ಚನ್ನಗಿರಿ ಭಾಗಕ್ಕೆ ಕುರಿಗಳ ಸಮೇತ ತೆರಳಿದ್ದರು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆ ಬಿದ್ದ ಕಾರಣ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದರು. ಮಾರ್ಗಮಧ್ಯೆ ಈರಜ್ಜನಹಟ್ಟಿ ಗೇಟ್ ಬಳಿ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಸುಮಾರು ೨ ಲಕ್ಷ ಮೌಲ್ಯದ ಕುರಿಗಳು ಸಾವಿಗೀಡಾಗಿವೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.