ಖಾಸಗಿ ಟ್ಯಾಂಕರ್ ಗಳಿಗೆ ನೀರು: ಹೊಸಪೇಟೆ ನಗರಸಭೆಯಲ್ಲಿ ಕೋಲಾಹಲ

ಹೊಸದಿಗಂತ ವರದಿ, ವಿಜಯನಗರ:

ಹೊಸಪೇಟೆಯಲ್ಲಿ ಸಾರ್ವಜನಿಕರಿಗೆ‌ ಉಚಿತವಾಗಿ ನೀರು ಒದಗಿಸುವ ಬಗ್ಗೆ ನಗರಸಭೆ ಅಧ್ಯಕ್ಷೆ ಎ.ಲತಾ ಅಧ್ಯಕ್ಷತೆಯಲ್ಲಿ ಸೋಮವಾರ ಕರೆದಿದ್ದ ತುರ್ತು ಸಭೆಯಲ್ಲಿ ಸದಸ್ಯರು ಹಾಗೂ ಪೌರಾಯುಕ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಬಿಜೆಪಿ ಸದಸ್ಯ ಎನ್.ರೂಪೇಶ ಕುಮಾರ್, ಜಂಬುನಾಥ ಎಲ್.ಎಸ್.ಆನಂದ, ರಮೇಶ ಗುಪ್ತಾ, ಜೀವರತ್ನಂ, ಬುಜ್ಜಿ, ರೋಹಿಣಿ ವೆಂಕಟೇಶ, ಹುಲಿಗಮ್ಮ, ಶಿಲ್ಪಾ ಧ್ವಾರಕೇಶ, ಕೆ.ಗೌಸ್ ಮತ್ತಿತರು ಸಭೆಗೆ ಕರೆಯಲು ಕಾರಣವೇನು? ಕಳೆದ 20 ವರ್ಷಗಳಿಂದ ದಾನಿಗಳು ಉಚಿತವಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ಈಗ ಅದಕ್ಕೆ ಅಡ್ಡಿ ಪಡಿಸುವ ಅಗತ್ಯವೇನು? ಸಭೆ ಕರೆಯಲು ಕಾರಣವೇನು ಎಂಬುದನ್ನು ಮೊದಲು ಸ್ಪಷ್ಟ ಪಡಿಸುವಂತೆ ಒತ್ತಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಚಂದ್ರಪ್ಪ, ನಿನ್ನೆ‌ ಆಗಿರುವ ಘಟನೆಯನ್ನು ಬದಿಗಿಡಿ. ಈಗ ಖಾಸಗಿ ಟ್ಯಾಂಕರ್‌ಗಳಿಗೆ ನಗರಸಭೆಯಿಂದ ನೀರು‌ಕೊಡಬೇಕೋ, ಬೇಡವೋ ಎನ್ನುವ ಬಗ್ಗೆ ಚರ್ಚಿಸಲು ಅಧ್ಯಕ್ಷರ ಸೂಚನೆಗೆ ಮೇರೆಗೆ ಸಭೆ ಕರೆಯಲಾಗಿದೆ. ಅಲ್ಲದೇ, ಇದು ನೀತಿ ಸಂಹಿತೆ ವ್ಯಾಪ್ತಿಗೆ ಒಳಪಡಲಿದೆ‌‌. ಅದನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸಬೇಕು ಎಂದು ಕೇಳಿಕೊಂಡರು.

ಪೌರಾಯುಕ್ತರ ಈ ಮಾತಿನಿಂದ ಕೆರಳಿದ ಸದಸ್ಯರು, ಪಕ್ಷಾತೀತವಾಗಿ ಮುಗಿಬಿದ್ದರು. ಖಾಸಗಿ ಟ್ಯಾಂಕರ್ ಗಳಿಗೆ ನೀರು ಒದಗಿಸಲು ಸರ್ವ ಸದಸ್ಯರ ಒಪ್ಪಿಗೆಯಿದೆ. ಈ ಕೂಡಲೇ ಠರಾವು ಮಾಡಿ, ಆದೇಶಿಸಬೇಕು ಎಂದರು. ಅದಕ್ಕೆ ಓರ್ವ ಪಕ್ಷೇತರ ಸದಸ್ಯ ಅಬ್ದುಲ್ ಖದೀರ್ ಹಾಗೂ ನಾಮನಿರ್ದೇಶಿತ ಸದಸ್ಯರಾದ ಮೌಲಾಲಿ, ರಘು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಗದ್ದಲ ಕೋಲಾಹಲ ಸೃಷ್ಡಿಯಾಯಿತು. ಖಾಸಗಿ ಟ್ಯಾಂಕರ್ ಗಳಿಗೆ ಅನುಮತಿಸಬೇಕೆಂದು ಆಗ್ರಹಿಸಿ ಸದಸ್ಯರು‌ ವೇದಿಕೆ ಮುಂಭಾಗ ಧರಣಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!