ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ಕೈತಪ್ಪಲು ಬಿಎಲ್ ಸಂತೋಷ್ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ನಾವು ಅವರ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ ಹಾಗೂ ರೋಡ್ ಶೋದಲ್ಲಿ ಭಾಗವಹಿಸಲು ಮುಧೋಳ ನಗರಕ್ಕೆ ಆಗಮಿಸಿದ ಬೊಮ್ಮಾಯಿ ಮಾಧ್ಯಮಗಳ ಜೊತೆ ಮಾತನಾಡುತ್ತ, ಜಗದೀಶ್ ಶೆಟ್ಟರ್ ಹೇಳಿಕೆ ಸರಿಯಲ್ಲ. ನಾವು ರಾಜ್ಯಮಟ್ಟದಿಂದ ಅವರ ಹೆಸರನ್ನು ಕಳುಹಿಸಿದ್ದೆವು. ಮೇಲ್ಮಟ್ಟದಲ್ಲಿ ಒಂದು ನೀತಿಯ ಮೇಲೆ ಟಿಕೆಟ್ ಫೈನಲ್ ಮಾಡಿದ್ದಾರೆ. ಈಗಾಗಲೇ ಆ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಅವರ ಆರೋಪದ ಬಗ್ಗೆ ನಾವೇನು ತಲೆಕೆಡಿಸಿಕೊಳ್ಳುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಸೀಟ್ ಗೆಲ್ಲಲು ರೂಪುರೇಷೆಗಳನ್ನು ಮಾಡಿದೆ. ಹೆಚ್ಚು ಸೀಟ್ ಗೆದ್ದೇಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೆಟ್ಟರ್ ಬಿಜೆಪಿ (BJP) ತೊರೆದಿದ್ದರಿಂದ ಲಿಂಗಾಯತ ಮತಗಳಿಗೆ ಪೆಟ್ಟು ಬೀಳುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಕರ್ನಾಟಕ ರಾಜಕಾರಣದ ಲಿಂಗಾಯತರು ಜಾಗೃತ ಮತದಾರರಿದ್ದಾರೆ. ಯಾವಾಗ ಯಾವ ನಿರ್ಣಯ ತೆಗೆದುಕೊಂಡಿದ್ದಾರೋ ಸರಿಯಾಗಿಯೇ ತೆಗೆದುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷ ಲಿಂಗಾಯತರನ್ನೇ ಒಡೆಯಲು ಹೊರಟಿತ್ತು. ಲಿಂಗಾಯತ ಛಿದ್ರ ಮಾಡೋಕೆ ಹೊರಟಿದ್ದ ಕಾಂಗ್ರೆಸ್ ಕ್ರಮ ಯಾರೂ ಮರೆಯಲ್ಲ ಎಂದು ಪರೋಕ್ಷವಾಗಿ ಎಂಬಿ ಪಾಟೀಲ್‌ಗೆ ಟಾಂಗ್ ನೀಡಿದರು.