ಹೊಸದಿಗಂತ ವರದಿ: ಶಿವಮೊಗ್ಗ:
ನಗರದ ಆರ್‌ಎಮ್‌ಎಲ್ ನಗರದಲ್ಲಿ ಮನೆ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ ಸುಮಾರು 10 ಲಕ್ಷ ರೂ. ವೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದರು.
ದೊಡ್ಡಪೇಟೆ ಠಾಣೆ ಆವರಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಆರ್‌ಎಮ್‌ಎಲ್ ನಗರದ ಸಲ್ಮಾ ಖಾನಂ ಅವರು ತಮ್ಮ ಮನೆಗೆ ಬೀಗ ಹಾಕಿಕೊಂಡು 2022ರ ಮಂಏ ತಿಂಗಳಿನಲ್ಲಿ ಸೌದಿ ಅರೇಬಿಯಾದಲ್ಲಿದ್ದ ಗಂಡನ ಬಳಿ ಹೋಗಿದ್ದರು. ಬಳಿಕ 2023ರ ಜೂನ್ ತಿಂಗಳಿನಲ್ಲಿ ವಾಪಾಸ್ ಮನೆಗೆ ಬಂದಿದ್ದರು. ಆಗ ನೋಡಿದರೆ ಮನೆಯ ಇಂಟರ್‌ಲಾಕ್ ಮುರಿದು ಒಳಗಡೆ ಪ್ರವೇಶ ಮಾಡಿ ಕಳವು ಮಾಡಲಾಗಿತ್ತು ಎಂದು ತಿಳಿಸಿದರು.
ಅವರ ಮನೆಯ ಗಾಡ್ರೇಜ್ ಬೀರುವಿನಲ್ಲಿದ್ದ 6.14 ಲಕ್ಷ ರೂ. ಬೆಲೆ ಬಾಳುವ 139 ಗ್ರಾಂ ಬಂಗಾರದ ಒಡವೆಗಳು, 500 ರಿಯಾಲ್ ಮುಖಬೆಲೆಯ 09 ಸೌದಿ ಅರೇಬಿಯಾದ ನೋಟುಗಳನ್ನು ಕಳವು ಮಾಡಲಾಗಿತ್ತು. ದೊಡ್ಡಪೇಟೆ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಅದರ ತನಿಖೆಗೆ ತಂಡ ರಚಿಸಲಾಗಿತ್ತು ಎಂದು ತಿಳಿಸಿದರು.
ಈ ತಂಡ ತಿಮ್ಮಾನಗರ 1ನೇ ಕ್ರಾಸ್ ಸೂಪರ್ ಮಾರ್ಕೆಟ್ ಹಿಂಭಾಗದ ನಿವಾಸಿ, ಸಲೀಂ ಬಿನ್ ಅಬ್ದುಲ್ಲಾ (44 ವರ್ಷ) ನನ್ನು ವಶಕ್ಕೆ ಪಡೆದು ತನಿಖೆ ನಡೆಸಿತ್ತು. ಆಗ ಆರೋಪಿ ಕಳವು ಮಾಡಿ ಮತ್ತೂಟ್ ಫೈನಾನ್ಸ್ ಮತ್ತು ಐಐಎಫ್‌ಎಲ್ ಫೈನಾನ್ಸ್‌ಗಳಲ್ಲಿ ಗಿರವಿ ಇಟ್ಟಿದ್ದಂತಹ 8.28 ಲಕ್ಷ ರೂ. ವೌಲ್ಯದ 155 ಗ್ರಾಂ ಬಂಗಾರದ ಒಡವೆಗಳು, 8350 ರೂ. ಬೆಲೆಯ ಬೆಳ್ಳಿ ವಸ್ತುಗಳು, 21,400 ರೂ. ಬೆಲೆಯ ವಾಚ್, ಆರ್ಟಿಫಿಷಿಯಲ್ ಒಡವೆಗಳು, 69,000 ರೂ. ಬೆಲೆ ಬಾಳುವ 06 ಸೌದಿ ಅರೇಬಿಯಾದ ನೋಟುಗಳು ಸೇರಿದಂತೆ 10 ಲಕ್ಷ ರೂ. ವೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ರಕ್ಷಣಾಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿವೈಎಸ್‌ಪಿ ಬಾಬು ಅಂಜನಪ್ಪ ಸುದ್ದಿಗೋಷ್ಟಿಯಲ್ಲಿದ್ದರು.