ಶಿಂಧೆ ಸರ್ಕಾರ ಆರೇ ತಿಂಗಳಲ್ಲಿ ಬೀಳಲಿದೆ : ಶರದ್‌ ಪವಾರ್‌ ಭವಿಷ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಮಹಾವಿಕಾಸ ಆಘಾಡಿಯನ್ನು ಕೆಳಕ್ಕಿಳಿಸಿ ಅಧಿಕಾರಕ್ಕೇರಿರುವ ಏಕನಾಥ್‌ ಶಿಂಧೆ ಸರ್ಕಾರವು ಇನ್ನು ಆರೇ ತಿಂಗಳಲ್ಲಿ ಕುಸಿಯಲಿದೆ, ರಾಜ್ಯದಲ್ಲಿ ಮತ್ತೆ ಮರುಚುನಾವಣೆ ನಡೆಯಲಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಭವಿಷ್ಯ ನುಡಿದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಭಾನುವಾರ ಸಂಜೆ ಮುಂಬೈನಲ್ಲಿ ಎನ್‌ಸಿಪಿ ಶಾಸಕರು ಮತ್ತು ಇತರ ಪಕ್ಷದ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಹೀಗೆಂದಿದ್ದಾರೆ ಎನ್ನಲಾಗಿದೆ. “ಮಹಾರಾಷ್ಟ್ರದಲ್ಲಿ ಹೊಸದಾಗಿ ರಚನೆಯಾದ ಸರ್ಕಾರವು ಮುಂದಿನ ಆರು ತಿಂಗಳಲ್ಲಿ ಪತನವಾಗಬಹುದು, ಆದ್ದರಿಂದ ಎಲ್ಲರೂ ಮಧ್ಯಂತರ ಚುನಾವಣೆಗೆ ಸಿದ್ಧರಾಗಿರಬೇಕು” ಎಂದು ಪವಾರ್ ಹೇಳಿದ್ದಾರೆ ಎಂದು ಎನ್‌ಸಿಪಿ ನಾಯಕರೊಬ್ಬರು ಮಾಧ್ಯಮಗಳಿಗೆ ತಿಳಿಸಿರುವ ಕುರಿತು ವರದಿಯಾಗಿದೆ.

“ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುವ ಬಂಡಾಯ ಶಿವಸೇನೆ ಶಾಸಕರು ಪ್ರಸ್ತುತ ವ್ಯವಸ್ಥೆಯಿಂದ ಅತೃಪ್ತರಾಗಿದ್ದಾರೆ, ಒಮ್ಮೆ ಸಚಿವರ ಖಾತೆಗಳನ್ನು ವಿತರಿಸಿದರೆ, ಅವರ ಅಶಾಂತಿ ಹೊರಬರುತ್ತದೆ, ಇದು ಅಂತಿಮವಾಗಿ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ. ಬಿಜೆಪಿಯೊಂದಿಗಿನ ಪ್ರಯೋಗ ವಿಫಲವಾದ ಬಳಿಕ ಭಿನ್ನಮತೀಯ ಶಾಸಕರು ಪಕ್ಷಕ್ಕೆ ಮರಳುತ್ತಾರೆ ಎಂದು ಶರದ್ ಪವಾರ್ ಭರವಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು ಕೇವಲ ಆರೇ ತಿಂಗಳು ಉಳಿದಿರುವುದರಿಂದ ಎಲ್ಲಾ ಎನ್‌ಸಿಪಿ ಶಾಸಕರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂದು ಅವರು ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!