ನಾಳೆ ಶಿಂಜೋ ಅಬೆ ಅಂತ್ಯಕ್ರಿಯೆ: ಜಪಾನ್​ಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಪಾನ್​ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಪಾನ್​ಗೆ ಪ್ರಯಾಣ ಬೆಳೆಸಿದರು.

ನಾಳೆ(ಮಂಗಳವಾರ) ಜಪಾನ್​ ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆ ನಡೆಯಲಿದೆ. ಕೆಲ ದಿನಗಳ ಹಿಂದೆ ಶಿಂಜೋ ಅಬೆ ಅವರು ಯುವಕನೊಬ್ಬನ ಗುಂಡಿನ ದಾಳಿಗೆ ಬಲಿಯಾಗಿದ್ದರು. ಜಪಾನ್​ ಪ್ರಧಾನಿ ಫುಮಿಯೊ ಕಿಶಿದಾ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಿದ್ದರು.ಇದರಂತೆ ಮಂಗಳವಾರ ಶಿಂಜೋ ಅಬೆ ಅವರಿಗೆ ದೇಶ ಅಂತಿಮ ವಿದಾಯ ಹೇಳಲಿದೆ.

ವಿಶ್ವದ 20 ಕ್ಕೂ ಹೆಚ್ಚು ದೇಶಗಳ ನಾಯಕರು ಅಬೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಜಪಾನ್​ಗೆ ತೆರಳುವ ಮೊದಲು ಪ್ರಧಾನಿ ಮೋದಿ ಅವರು ಟೋಕಿಯೋ ಭೇಟಿ ಬಗ್ಗೆ ಮಾಹಿತಿ ನೀಡಿದ್ದರು.

‘ನಾಳೆ ನಡೆಯಲಿರುವ ಆತ್ಮೀಯ ಸ್ನೇಹಿತ ಮತ್ತು ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಪಾನ್​ಗೆ ಭೇಟಿ ನೀಡಲಿದ್ದೇನೆ. ಎಲ್ಲ ಭಾರತೀಯರ ಪರವಾಗಿ ಸಂತಾಪ ಸೂಚಿಸಲಿದ್ದೇನೆ. ಭಾರತ – ಜಪಾನ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕೆಲಸ ಮುಂದುವರಿಸಲಾಗುವುದು’ ಎಂದು ಟ್ವೀಟ್​ ಮಾಡಿದ್ದರು.

ಶಿಂಜೋ ಅಬೆ ಅವರು ಜಪಾನ್​ ಪ್ರಧಾನಿಯಾಗಿದ್ದ ವೇಳೆ ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದರು. ಅಲ್ಲದೇ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ನೆರವಾಗಿದ್ದರು. ಇದರಿಂದ ಅವರಿಗೆ 2021 ರ ಸಾಲಿನ ಪ್ರತಿಷ್ಠಿತ ಪದ್ಮವಿಭೂಷಣ ಗೌರವ ಪ್ರದಾನ ಮಾಡಲಾಗಿತ್ತು.

ಇನ್ನು ಜುಲೈ 8 ರಂದು ನಾರಾ ನಗರದಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ಶಿಂಜೋ ಅಬೆ ಅವರ ಮೇಲೆ ಯುವಕನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಇದರಿಂದ ಭಾರತ ಸರ್ಕಾರ ಜುಲೈ 9 ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!