ಶಿರೂರು ಟೋಲ್ ಪ್ಲಾಜಾ ದುರಂತ: ಆಧಾರ ಸ್ತಂಭವನ್ನೇ ಕಳೆದುಕೊಂಡ 3 ಕುಟುಂಬ, ತಬ್ಬಲಿಗಳಾದ ಮಕ್ಕಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿಯ ಶಿರೂರು ಬಳಿ ನಡೆದ ಭೀಕರ ಅಪಘಾತದಲ್ಲಿ ಆಂಬುಲೆನ್ಸ್ ಪಲ್ಟಿಯಾಗಿ ಸಾವನ್ನಪ್ಪಿದ್ದ ದಂಪತಿ ಸೇರಿ ನಾಲ್ವರ ಮೃತದೇಹಗಳನ್ನು ಹೊನ್ನಾವರದ ಹಾಡಗೇರಿಯಲ್ಲಿ ಗುರುವಾರ ಅಂತ್ಯ ಸಂಸ್ಕಾರ ನಡೆಸಲಾಯಿತು. ಆದರೆ, ಜವರಾಯನ ಅಟ್ಟಹಾಸಕ್ಕೆ ದುಡಿದು ತಿನ್ನುವ ಜೀವಗಳು ಬಾರದ ಲೋಕಕ್ಕೆ ತೆರಳಿದ್ದು, ಮೃತ ದಂಪತಿಯ ಮಕ್ಕಳು ಅನಾಥರಾದರೇ, ಮತ್ತಿಬ್ಬರ ಮಕ್ಕಳು ತಂದೆಯನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ದೃಶ್ಯಗಳು ನೆರದಿದ್ದವರ ಕಣ್ಣೀರ ಕಡಲಲ್ಲಿ ಮುಳುಗಿಸಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಶಿರೂರು ಚೆಕ್ ಪೋಸ್ಟ್ ಬಳಿ ಬುಧವಾರ ನಡೆದ ಭೀಕರ ಆಂಬುಲೆನ್ಸ್ ದುರಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತೀರುವ ದೃಶ್ಯ ಎಂತವರ ಎದೆಯನ್ನು ಒಮ್ಮೆ ನಡುಗಿಸುವಂತಿದೆ. ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಗಜಾನನ ನಾಯಕ ಎಂಬುವವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ನಾಲ್ವರು ಸಾವನ್ನಪ್ಪಿ , ಟೋಲ್ ಸಿಬ್ಬಂದಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ್ದ ರೋಗಿ ಗಜಾನನ ಗಣಪತಿ ನಾಯ್ಕ, ಅವರ ಪತ್ನಿ ಜ್ಯೋತಿ ನಾಯ್ಕ, ಸಂಬಂಧಿಕರಾದ ಮಂಜುನಾಥ ನಾಯ್ಕ ಹಾಗೂ ಲೋಕೇಶ್ ನಾಯ್ಕಇವರ ಮೃತದೇಹಗಳನ್ನು ಹುಟ್ಟೂರು ಹೊನ್ನಾವರದ ಹಾಡಗೇರಿಗೆ ತಂದು ಗುರುವಾರ ಅಂತ್ಯಕ್ರಿಯೆ ನಡೆಸಲಾಗಿದೆ.

ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಮಕ್ಕಳು
ಮೃತ ಗಜಾನನ ನಾಯ್ಕ ಹಾಗೂ ಜ್ಯೋತಿ ಇಬ್ಬರು ಸಾವನ್ನಪ್ಪಿರುವುದರಿಂದ, ಇವರ ಇಬ್ಬರು ಪುಟ್ಟ ಮಕ್ಕಳು ಇದೀಗ ತಂದೆ ತಾಯಿ ಇಲ್ಲದೆ ಅನಾಥರಾಗಿದ್ದಾರೆ. ಇದಲ್ಲದೆ ಮೃತರಾದ ಮಂಜುನಾಥ ಹಾಗೂ ಲೋಕೇಶ್ ಅವರಿಗೂ ತಲಾ ಇಬ್ಬರು ಮಕ್ಕಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!