ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇ 28, 2023 ರಂದು ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್) ಶತಮಾನೋತ್ಸವವು ನಡೆಯುತ್ತಿರುವುದರಿಂದ, ಕಳೆದ ವರ್ಷದಿಂದ ಎರಡು ತೆಲುಗು ರಾಜ್ಯಗಳು ಮತ್ತು ಪ್ರಪಂಚದಾದ್ಯಂತ ಶತಮಾನೋತ್ಸವ ಆಚರಣೆಯ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರ ಅಂಗವಾಗಿ ಇತ್ತೀಚೆಗೆ ವಿಜಯವಾಡದಲ್ಲಿ ಅದ್ಧೂರಿ ಸಭೆ ನಡೆಯಿತು ರಜನಿಕಾಂತ್ ಮುಖ್ಯ ಅತಿಥಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಕನ್ನಡದ ಸ್ಟಾರ್ ಹೀರೋ ಶಿವರಾಜ್ ಕುಮಾರ್ ಕೂಡ ಭಾಗವಹಿಸಿದ್ದರು. ಇಲ್ಲಿ ಶಿವಣ್ಣ-ಬಾಲಯ್ಯ ಮಲ್ಟಿ ಸ್ಟಾರರ್ ಸಿನಿಮಾ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ಬಾಲ್ಯದಲ್ಲಿ ನಾವು ಕೂಡ ಚೆನ್ನೈನಲ್ಲಿ ಬೆಳೆದಿದ್ದೇವೆ. ಪ್ರತಿನಿತ್ಯ ಶಾಲೆಗೆ ಹೋಗುವಾಗ ಚೆನ್ನೈನಲ್ಲಿರುವ ಎನ್‌ಟಿಆರ್ ಮನೆಯಿಂದ ಹಾದು ಹೋಗುತ್ತಿದ್ದೆವು. ಪ್ರತಿನಿತ್ಯ ಅಲ್ಲಿ ಜನ ತುಂಬುತ್ತಿದ್ದರು. ಆ ಜನರನ್ನು ದಾಟಲು ಕನಿಷ್ಠ 5 ನಿಮಿಷ ಬೇಕು. ಒಬ್ಬ ನಾಯಕನಿಗೆ ದಿನನಿತ್ಯದ ಜನಸಂದಣಿ ಸಾಮಾನ್ಯ ಸಂಗತಿಯಲ್ಲ. ಎನ್ ಟಿಆರ್ ಸರ್ ಸಿಎಂ ಆದ ನಂತರ ಹೈದರಾಬಾದಿನಲ್ಲಿ ಫಿಲ್ಮ್ ಫೇರ್ ಅವಾರ್ಡ್ ಸಮಾರಂಭ ನಡೆದಾಗ ಸಿಎಂ ಆದರೂ ಕೂಡ ಸಾಮಾನ್ಯ ನಟರಂತೆ ಬಂದು ಅತಿಥಿಗಳನ್ನೆಲ್ಲ ಬರಮಾಡಿಕೊಂಡಿದ್ದು ಅವರ ಹಿರಿಮೆ.
ಜೊತೆಗೆ ನನ್ನ ತಂದೆ ಮತ್ತು ಎನ್‌ಟಿಆರ್ ತುಂಬಾ ಆತ್ಮೀಯ ಸ್ನೇಹಿತರು. ಆದುದರಿಂದಲೇ ನಾನು ಮತ್ತು ಬಾಲಕೃಷ್ಣ ಬಾಲ್ಯದಿಂದಲೂ ಆತ್ಮೀಯರು. ವಯಸ್ಸಾದಂತೆ ನಮ್ಮ ಸ್ನೇಹ ಗಟ್ಟಿಯಾಗುತ್ತದೆ. ಬಾಲಯ್ಯ ಮತ್ತು ನಾನು ಸಹೋದರರಂತೆ. ನಾನು ಗೌತಮಿ ಪುತ್ರ ಶಾತಕರ್ಣಿ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟೆ. ಶೀಘ್ರದಲ್ಲೇ ಬಾಲಕೃಷ್ಣ ಮತ್ತು ನಾನು ಒಟ್ಟಿಗೆ ದೊಡ್ಡ ಸಿನಿಮಾ ಮಾಡಲಿದ್ದೇವೆ ಎಂದರು.
ಕಳೆದ ಕೆಲವು ದಿನಗಳಿಂದ ಶಿವಣ್ಣ-ಬಾಲಯ್ಯ ಜೊತೆಯಾಗಿ ದೊಡ್ಡ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಎನ್ ಟಿಆರ್ ಶತದಿನೋತ್ಸವದ ಅಂಗವಾಗಿ ಶಿವಣ್ಣ ಈ ಬಗ್ಗೆ ಸ್ಪಷ್ಟನೆ ನೀಡಿರುವುದರಿಂದ ತೆಲುಗು, ಕನ್ನಡ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಸಿನಿಮಾವನ್ನು ಯಾವ ನಿರ್ದೇಶಕ ನಿರ್ದೇಶನ ಮಾಡುತ್ತಾರೋ ನೋಡಬೇಕು.