ಹೊಸದಿಗಂತ ವರದಿ ಶಿವಮೊಗ್ಗ:
ಮನೆಗಳ ಕಳ್ಳತನ ತಡೆಯುವ ಸಲುವಾಗಿ ಜಿಲ್ಲಾ ಪೊಲೀಸರು ಹೊಸದೊಂದು ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಇಂದಿನಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಇಂತಹ ವ್ಯವಸ್ಥೆ ರಾಜ್ಯದಲ್ಲಿಯೇ ಪ್ರಥಮ ಎಂಬುದು ವಿಶೇಷ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಈ ಕುರಿತು ಶುಕ್ರವಾರ ಮಾಹಿತಿ ನೀಡಿ, ಬೀಗ ಹಾಕಿದ ಮನೆಗಳ ಸುರಕ್ಷತೆಯ ದೃಷ್ಟಿಯಿಂದ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಜಿಲ್ಲೆಯ ಯಾರೇ ನಿವಾಸಿಗಳು ತಮ್ಮ ಮನೆಗೆ ಬೀಗ ಹಾಕಿ ಹೊರಹೋಗುವುದಾದರೆ ಪೊಲೀಸ್ ಇಲಾಖೆ ವಾಟ್ಸಪ್ ಸಂಖ್ಯೆ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ನೀಡಿದರೆ ಸಾಕು. ಆ ಮನೆಯವರು ವಾಪಾಸ್ ಬರುವ ತನಕ ಪೊಲೀಸ್ ಇಲಾಖೆ ನಿಗಾ ಇಡಲಿದೆ ಎಂದರು.
ಪೊಲೀಸ್ ಇಲಾಖೆ ನಿಯಂತ್ರಣ ಕೊಠಡಿಯ ವಾಟ್ಸಪ್ ಸಂಖ್ಯೆ 8277982901 ಗೆ ಮನೆ ಬೀಗ ಹಾಕಿ ಹೋಗುತ್ತಿರುವ ಮಾಹಿತಿ ನೀಡಬೇಕು. ಈ ಸಂಖ್ಯೆಗೆ ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕ, ಮನೆಯ ವಿಳಾಸ ಮತ್ತು ವಾಟ್ಸಪ್‌ನಲ್ಲಿ ಲೋಕೇಶನ್ ಹಾಗೂ ಮನೆಯ ಮುಂದಿನ ಸೆಲ್ಫಿ ವಾಟ್ಸಪ್ ಮಾಡಿದರೆ ಸಾಕು. ಈ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ನಿಯಂತ್ರಣ ಕೊಠಡಿ ಮತ್ತು ಸಂಬಂಧಿಸಿದ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ಗೆ ಮಾತ್ರ ಮಾಹಿತಿ ಇರಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆಯಬಹುದು ಎಂದು ತಿಳಿಸಿದರು.



