ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ನಟಿ ಶೋಭಾ ಶೆಟ್ಟಿ ‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ಫುಲ್ ಸ್ಟಾಪ್ ಇಟ್ಟು ಮನೆಯಿಂದ ಹೊರಬಂದಿದ್ದಾರೆ.
ಇದೀಗ ಬಿಗ್ ಬಾಸ್‌ನಿಂದ ಹೊರಬಂದು ನಟ ಕಿಚ್ಚ ಸುದೀಪ್‌ಗೆ ಸುದೀರ್ಘವಾಗಿ ಪತ್ರ ಬರೆದಿದ್ದಾರೆ. ಇದೀಗ ನಟಿಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ. ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ.
ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ, ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ಪ್ರೀತಿಯ, ಶೋಭಾ ಶೆಟ್ಟಿ ಎಂದು ಸುದೀರ್ಘ ಪತ್ರ ಬರೆದಿದ್ದಾರೆ.
ತೆಲುಗಿನ ಬಿಗ್‌ಬಾಸ್ ಸೀಸನ್ 7ರಲ್ಲಿ ಸಖತ್ ಸೌಂಡು ಮಾಡಿದ್ದ ಶೋಭಾ ಶೆಟ್ಟಿ ಕೊನೆಯವರೆಗೂ ಪ್ರೀತಿ ಗಳಿಸಿ ಉಳಿದುಕೊಂಡಿದ್ದರು. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ತೆಲುಗಿನ ವೀಕ್ಷಕರ ಅಭಿರುಚಿ ಮತ್ತು ಕನ್ನಡ ವೀಕ್ಷಕರ ಅಭಿರುಚಿ ವಿಭಿನ್ನವಾಗಿದೆ ಎಂದು ಶೋಭಾ ಅವರ ಮನಸ್ಸಿಗೆ ಅನಿಸಿತೋ ಗೊತ್ತಿಲ್ಲ. ಆದರೆ ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.