ಉದ್ಯಮಿ ವಿಜಯ್ ಮಲ್ಯ ಗೆ ಶಾಕ್: ಷೇರು ಮಾರುಕಟ್ಟೆಯಿಂದ 3 ವರ್ಷ ನಿರ್ಬಂಧ ಹೇರಿದ ಸೆಬಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಉದ್ಯಮಿ ವಿಜಯ್ ಮಲ್ಯ ಗೆ ಷೇರು ಮಾರುಕಟ್ಟೆ ನಿಯಂತ್ರಕ ‘ಸೆಬಿ’ ದೇಶದ ಷೇರು ಮಾರುಕಟ್ಟೆಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವಹಿವಾಟು ನಡೆಸದಂತೆ ಮತ್ತು 3 ವರ್ಷಗಳವರೆಗೆ ಯಾವುದೇ ಲಿಸ್ಟೆಡ್ ಕಂಪನಿಗಳ ಜತೆ ವ್ಯವಹಾರ ನಡೆಸದಂತೆ ನಿರ್ಬಂಧಿಸಿದೆ.

ಶುಕ್ರವಾರ ಹೇಳಿಕೆ ನೀಡಿರುವ ಸೆಬಿ, ’ಮಲ್ಯ ಅವರ ಮ್ಯೂಚುಯಲ್ ಫಂಡ್ ಯೂನಿಟ್‌ಗಳು ಸೇರಿದಂತೆ ಎಲ್ಲಾ ಷೇರು ಹಿಡುವಳಿಗಳನ್ನು ಫ್ರೀಜ್ ಮಾಡಬೇಕು’ ಎಂದು ನಿರ್ದೇಶಿಸಿದೆ.

ಮ್ಯಾಟರ್‌ಹಾರ್ನ್ ವೆಂಚರ್ಸ್ ಎಂಬ ಹೆಸರಿನ ವಿದೇಶಿ ಸಾಂಸ್ಥಿಕ ಹೂಡಿಕೆ ಕಂಪನಿ ಮೂಲಕ ಮಲ್ಯ ಅವರು ಭಾರತದಲ್ಲಿ ಪರೋಕ್ಷವಾಗಿ ವ್ಯಾಪಾರ ಮಾಡುತ್ತಾರೆ. ಈ ಮೂಲಕ ಅವರ ಷೇರುಪೇಟೆಯಲ್ಲಿ ನಿಜವಾದ ಗುರುತನ್ನು ಮರೆಮಾಚುತ್ತಾರೆ. ಹೀಗಾಗಿ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (ಸೆಬಿ) ಈ ಕ್ರಮ ಜರುಗಿಸಿದೆ.

ವಿಜಯ್ ಮಲ್ಯ ಕಿಂಗ್‌ಫಿಶರ್ ಬಿಯರ್ ತಯಾರಕ ಯುನೈಟೆಡ್ ಬ್ರೂವರೀಸ್‌ನಲ್ಲಿ 8.1% ಪಾಲನ್ನು ಹೊಂದಿದ್ದಾರೆ, ಸ್ಮಿರ್ನಾಫ್ ವೋಡ್ಕಾ ತಯಾರಕ ಯುನೈಟೆಡ್ ಸ್ಪಿರಿಟ್ಸ್‌ನಲ್ಲಿ 0.01% ಪಾಲನ್ನು ಹೊಂದಿದ್ದಾರೆ.

ಬ್ಯಾಂಕ್‌ಗಳಿಗೆ 9000 ಕೋಟಿ ರು. ಸಾಲ ವಂಚನೆ ಮಾಡಿ ಬ್ರಿಟನ್‌ನಲ್ಲಿ ನೆಲೆಸಿರುವ ವಿಜಯ್ ಮಲ್ಯ (68) ಅವರನ್ನು ಭಾರತಕ್ಕೆ ಗಡೀಪಾರು ಮಾಡಿ ತರಲು ಭಾರತ ಸರ್ಕಾರ ಯತ್ನಿಸುತ್ತಿದೆ. ಆದರೆ ನಾನಾ ಕಾನೂನು ಅಡ್ಡಿಗಳ ಕಾರಣ ಈವರೆಗೂ ಅದು ಕೈಗೂಡಿಲ್ಲ. 2016ರಿಂದ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!