ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳು ಸೇರಿದಂತೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಢಾಕಾ ನ್ಯಾಯಾಲಯ ಆದೇಶ ನೀಡಿದೆ.
ಗಡಿಪಾರಾಗಿ ಭಾರತದಲ್ಲಿರುವ ಹಸೀನಾ ಅವರ ಧನ್ಮೊಂಡಿ ನಿವಾಸ ‘ಸುದಾಸಧನ್’ ಮತ್ತು ಅವರ ಕುಟುಂಬ ಸದಸ್ಯರು ಹೊಂದಿರುವ ಇತರ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ ನೀಡಿದೆ.
ಭ್ರಷ್ಟಾಚಾರ ನಿಗ್ರಹ ಆಯೋಗ (ಎಸಿಸಿ) ಸಲ್ಲಿಸಿದ ಅರ್ಜಿಯ ನಂತರ ಢಾಕಾ ಮೆಟ್ರೋಪಾಲಿಟನ್ ಹಿರಿಯ ವಿಶೇಷ ನ್ಯಾಯಾಧೀಶ ಝಾಕಿರ್ ಹೊಸೇನ್ ಘಾಲಿಬ್ ಮಂಗಳವಾರ ಈ ಆದೇಶ ಹೊರಡಿಸಿದ್ದಾರೆ.
ಶೇಖ್ ಹಸೀನಾ ಜೊತೆಗೆ, ಅವರ ಮಗ ಸಾಜಿಬ್ ವಾಜೆದ್ ಜಾಯ್, ಮಗಳು ಸೈಮಾ ವಾಜೆದ್ ಪುತುಲ್, ಸಹೋದರಿ ಶೇಖ್ ರೆಹಾನಾ ಮತ್ತು ಅವರ ಪುತ್ರಿಯರಾದ ತುಲಿಪ್ ಸಿದ್ದಿಕ್ ಮತ್ತು ರದ್ವಾನ್ ಮುಜೀಬ್ ಸಿದ್ದಿಕ್ ಅವರ ಒಡೆತನದ ಇತರ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಲಾಗಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಭುಗಿಲೆದ್ದ ಗಲಭೆಗಳ ನಂತರ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಅವರು ಭಾರತಕ್ಕೆ ಪಲಾಯನ ಮಾಡಿದ್ದರು.