ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಸಾರಿಗೆ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ ಅಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ.
ಬಿಎಂಟಿಸಿ ಬಸ್ ದರ ಏರಿಕೆಯಾಗಿ 10 ವರ್ಷ ಆಗಿದ್ದರೆ ಕೆಎಸ್‌ಆರ್‌ಟಿಸಿ ದರ ಏರಿಕೆಯಾಗಿ 5 ವರ್ಷವಾಗಿದೆ. ಹೀಗಾಗಿ ಇಂದಿನ ಕ್ಯಾಬಿನೆಟ್ ಸಭೆಯ ಬಳಿಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದರ ಏರಿಕೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.
ಟಿಕೆಟ್ ದರ ಏರಿಕೆ ಅನಿವಾರ್ಯವಾಗಿ ಮಾಡಲೇಬೇಕಿತ್ತು. 15% ಟಿಕೆಟ್ ದರ ಏರಿಕೆ ಮಾಡಿದ್ದೇವೆ. ಬಿಜೆಪಿ ಅವರು ಸಾವಿರಾರು ಕೋಟಿ ಸಾಲ ಉಳಿಸಿ ಹೋಗಿದ್ದರು. ಸಾರಿಗೆ ಸಂಸ್ಥೆಗಳು ಉಳಿಬೇಕು ಹೀಗಾಗಿ ಟಿಕೆಟ್ ದರ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದರು.
ನಾಲ್ಕು ನಿಗಮಗಳಿಂದ ಬೇರೆ ಬೇರೆ ದರ ಏರಿಕೆಗೆ ಪ್ರಸ್ತಾವನೆ ಬಂದಿದೆ. ಬಿಎಂಟಿಸಿಯಿಂದ 42%, ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿಯಿಂದ 25%, ಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯಿಂದ 28% ದರ ಏರಿಕೆಗೆ ಪ್ರಸ್ತಾವನೆ ಬಂದಿತ್ತು.
ಇನ್ನು ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಹೆಚ್ಕೆ ಪಾಟೀಲ್, ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಚಿವ ಸಂಪುಟ ನಿರ್ಧರಿಸಿದ್ದು, ಜನವರಿ 5ರಿಂದ ಪರಿಷ್ಕೃತ ಟಿಕೆಟ್ ದರ ಅನ್ವಯವಾಗಲಿದೆ.