ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರಕ್ಕೆ ಇಂಡಿಯಾ ಮೈತ್ರಿಕೂಟದ ವಿರೋಧ ಪಕ್ಷದ ಸಂಸದರ ನಿಯೋಗವು ಭೇಟಿ ನೀಡಿದೆ.
ಈ ವೇಳೆ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ (Anusuiya Uikey) ಅವರನ್ನು ಭೇಟಿಯಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಂಘರ್ಷದ ಕುರಿತು ಜ್ಞಾಪನಾ ಪತ್ರವನ್ನು ಸಹ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.
ಜ್ಞಾಪನಾ ಪತ್ರದಲ್ಲಿ ಸಂಘರ್ಷದ ಆರಂಭದಿಂದಲೂ ಎರಡೂ ಕಡೆಯವರು ಬಿಚ್ಚಿಟ್ಟ ಹಿಂಸಾಚಾರದ ಕರಾಳ ಸನ್ನಿವೇಶಗಳು, ಸಂತ್ರಸ್ತರ ಆತಂಕ, ಅನಿಶ್ಚಿತತೆ, ನೋವು ಮತ್ತು ದುಃಖದ ಕಥೆಗಳನ್ನು ಕೇಳಿ ನಾವು ನಿಜವಾಗಿಯೂ ಆಘಾತಕ್ಕೊಳಗಾಗಿದ್ದೇವೆ. ಎಲ್ಲಾ ಸಮುದಾಯಗಳಲ್ಲಿ ಕೋಪ ಮತ್ತು ಪರಕೀಯತೆಯ ಭಾವನೆ ಇದೆ. ಇದನ್ನು ತಡ ಮಾಡದೇ ಪರಿಹರಿಸಬೇಕು ಎಂದು ನಿಯೋಗವು ಒತ್ತಾಯಿಸಿದೆ.
ಮಣಿಪುರ ಸಂಘರ್ಷದಲ್ಲಿ ಇದುವರೆಗೂ 140 ಕ್ಕೂ ಹೆಚ್ಚು ಸಾವು, 500 ಕ್ಕೂ ಹೆಚ್ಚು ಮಂದಿಗೆ ಗಾಯ, 5,000 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ ಅಂಕಿಅಂಶಗಳಿವೆ. ಎರಡು ಸಮುದಾಯಗಳ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈಫಲ್ಯವಾಗಿರುವುದು ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಇದುವರೆಗೂ 60,000 ಕ್ಕಿಂತ ಹೆಚ್ಚು ಜನರ ತಮ್ಮ ನೆಲವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರ ಆಗಿದ್ದಾರೆ ಎಂದು ಒಕ್ಕೂಟ ಹೇಳಿದೆ.
ಜೊತೆಗೆ ಆದ್ಯತೆಯ ಆಧಾರದ ಮೇಲೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ವಿವಿಧ ಸ್ಟ್ರೀಮ್‌ಗಳ ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆದ್ಯತೆಯಾಗಿರಬೇಕು ಎಂದು ನಿಯೋಗವು ಸಲಹೆ ನೀಡಿದೆ.
ಕಳೆದ ಮೂರು ತಿಂಗಳಿನಿಂದ ಮುಂದುವರಿದ ಇಂಟರ್ನೆಟ್ ನಿಷೇಧವು ಆಧಾರರಹಿತ ವದಂತಿಗಳನ್ನು ಹೆಚ್ಚಿಸುತ್ತಿದೆ. ಇದು ಅಸ್ತಿತ್ವದಲ್ಲಿರುವ ಅಪನಂಬಿಕೆಯನ್ನು ಹೆಚ್ಚಿಸುತ್ತದೆ. ಗೌರವಾನ್ವಿತ ಪ್ರಧಾನಿಯವರ ಮೌನವು ಮಣಿಪುರದ ಹಿಂಸಾಚಾರದ ಬಗ್ಗೆ ಅವರ ನಿರ್ಲಜ್ಜ ಉದಾಸೀನತೆಯನ್ನು ತೋರಿಸುತ್ತದೆ ಎಂದು ನಿಯೋಗ ತರಾಟೆಗೆ ತೆಗೆದುಕೊಂಡಿದೆ.
ಇದಕ್ಕೂ ಮುನ್ನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ, ಮೇ ಆರಂಭದಿಂದ ರಾಜ್ಯವನ್ನು ಆವರಿಸಿರುವ ಜನಾಂಗೀಯ ಹಿಂಸಾಚಾರದಿಂದ ನೊಂದಿರುವ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದಾರೆ. ನಿಯೋಗವು ಚುರಾಚಂದ್‌ಪುರ, ಇಂಫಾಲ್ ಮತ್ತು ಮೊಯಿರಾಂಗ್‌ನಲ್ಲಿನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದೆ.