February 13, 2026
Friday, February 13, 2026
spot_img

SHOCKING | ನಟ ವಿಜಯ್ ಟಿವಿಕೆ ರ‍್ಯಾಲಿಯಲ್ಲಿ ಮತ್ತೊಂದು ದುರಂತ: ಓರ್ವ ಸಾ*ವು, ಹಲವರು ಅಸ್ವಸ್ಥ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಸೇಲಂನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ರ‍್ಯಾಲಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಮಹಾರಾಷ್ಟ್ರ ಮೂಲದ ಎಸ್. ಸೂರಜ್ (37) ಮೃತ ವ್ಯಕ್ತಿ. ರ‍್ಯಾಲಿಯಲ್ಲಿ ಮೂರ್ಛೆ ಹೋಗಿದ್ದ ಅವರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯ್ ಸೇಲಂನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದರು. ತಮ್ಮ ನೆಚ್ಚಿನ ನಟ ಹಾಗೂ ನಾಯಕನ ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸೇರಿದ್ದರು. ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಏರಿಕೆಯಾಗಿದ್ದರಿಂದ ಮತ್ತು ವಿಪರೀತ ಜನಸಂದಣಿಯಿಂದಾಗಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು.

ಗರಿಷ್ಠ ಮಿತಿ 5,000 ಆಗಿದ್ದರೂ, ಟಿವಿಕೆ ಆಯೋಜಕರು 7,000 ಕ್ಕೂ ಹೆಚ್ಚು ಜನರಿಗೆ ಸ್ಥಳಕ್ಕೆ ಪ್ರವೇಶಿಸಲು ಅವಕಾಶ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾವಿನ ಹಿಂದಿನ ಕಾರಣ ಖಚಿತವಾದ ನಂತರ, ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನು ರ‍್ಯಾಲಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನೆರಳಿನ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ ಎಂದು ಹಲವರು ಆರೋಪಿಸಿದ್ದಾರೆ. ಹೀಟ್‌ವೇವ್‌ನಿಂದ ಹಲವರು ಕುಸಿದು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಕರೂರಿನಲ್ಲಿ ವಿಜಯ್‌ ರ್ಯಾಲಿಯಲ್ಲಿ ಸಂಭವಿಸಿದ ಜನಸಂದಣಿಯ ಕಾಲ್ತುಳಿತದಲ್ಲಿ 41 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು..

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !