ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕದ ಕ್ವಾರಿಯಲ್ಲಿ ಕಲ್ಲು ಒಡೆಯುವುದಕ್ಕಾಗಿ ತಂದ ಸ್ಫೋಟಕಗಳು ಬಿಸಿಲಿನ ತೀವ್ರತೆಗೆ ಏಕಾಏಕಿ ಸ್ಫೋಟಗೊಂಡಿದ್ದು, ವಿಟ್ಲ ಪೇಟೆ ಸೇರಿ ಆಸುಪಾಸಿನ ಜನರನ್ನು ಬೆಚ್ಚಿಬೀಳಿಸಿದೆ. ಸುಮಾರು ೪ ಕಿ.ಮೀ. ವ್ಯಾಪ್ತಿಯ ಮನೆಗಳಿಗೆ ಹಾನಿಯಾಗಿದ್ದು, ನೂರು ಮೀಟರು ದೂರದಲ್ಲಿರುವ ಎರಡು ಮನೆಗಳ ಛಾವಣಿ, ಕಿಟಕಿ ಸೇರಿ ಹಲವು ವಸ್ತುಗಳು ಜಖಂಗೊಂಡಿದೆ.
ಮಾಡತ್ತಡ್ಕ ಎನ್.ಎಸ್. ಕ್ರೆಶರ್ ಗೇ ಸೇರಿದ ಕ್ವಾರಿಯ ಸಮೀಪದಲ್ಲೇ ಘಟನೆ ನಡೆದಿದ್ದು, ಕಲ್ಲಿನ ರಾಶಿಯ ನಡುವಿನಲ್ಲಿ ಒಂದು ಬಾಕ್ಸ್ ಡೆಟೋನೇಟರ್ಸ್ ಹಾಗೂ ೨೦೦ ಜೆಲಿಟಿನ್ ಕಡ್ಡಿಗಳನ್ನು ಒಟ್ಟಿಗೇ ಇಡಲಾಗಿತ್ತೆನ್ನಲಾಗಿದೆ. ಸುಮಾರ್ ೧.೩೦ರ ಸುಮಾರಿಗೆ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿದ್ದ ಈಶ್ವರ ನಾಯ್ಕ ಹಾಗೂ ಅವರ ಪುತ್ರ ವಸಂತ ಮೋಹನ್ ಅವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. ೧ಕಿ. ಮೀ. ಆಸುಪಾಸಿನ ಸುಮಾರು ೧೫ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.
ಮನೆಗಳಲ್ಲಿನ ವಸ್ತುಗಳು ಎಲ್ಲೆಂದರಲ್ಲಿ ಬಿದ್ದು, ಹೆಂಚಿನ ಚಾವಣಿಯ ಕಟ್ಟಡಗಳಲ್ಲಿ ಹೆಂಚು ಸ್ಥಾನಪಲ್ಲಟವಾಗಿದೆ. ಕಿಟಕಿಯ ಗಾಜು ಪುಡಿಯಾಗಿದ್ದು, ಛಾವಣಿಗೆ ಹಾಸಿದ ಸಿಮೆಂಟ್ ಶೀಟ್ ಚೆಲ್ಲಾಪಿಲ್ಲಿಯಾಗಿದೆ. ಮನೆಯ ಪಿಲ್ಲರ್ ಗಳು ಬಿರುಕು ಬಿಟ್ಟಿದೆ.
ಕೋರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಕಲ್ಲಿನ ರಾಶಿಯಿದ್ದು, ಇದರ ತಪ್ಪಲು ಪ್ರದೇಶದಲ್ಲಿ ಯಾರಿಗೂ ಕಾಣದ ರೀತಿಯಲ್ಲಿ ದಾಸ್ತಾನು ಇರಿಸಲಾಗಿದ್ದು, ಇದರ ಸ್ಫೋಟಕ್ಕೆ ಅಕ್ಕಪಕ್ಕದ ಬಯಲು ಪ್ರದೇಶದಲ್ಲಿದ್ದ ಮುಳಿ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ಯತೀಶ್ ಎನ್., ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ರವಿ ಎಂ.ಎನ್., ಸಹಾಯಕ ಗಿರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಯ ಕೆ., ಗಣಿ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ಮಾಡಿದರು.