ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಾಯ ಯಾವಾಗ ಮತ್ತು ಎಲ್ಲಿ ಬರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಅಪಘಾತಗಳು ಅನಿರೀಕ್ಷಿತವಾಗಿ ಸಂಭವಿಸುತ್ತವೆ. ಕಣ್ಣು ರೆಪ್ಪೆ ಮಿಟುಕಿಸುವಷ್ಟರಲ್ಲಿ ಪ್ರಾಣ ಗಾಳಿಗೆ ತೂರಿ ಹೋಗುತ್ತವೆ. ಕೆಲವೊಮ್ಮೆ ಪವಾಡಗಳು ಸಂಭವಿಸಿ, ಅಪಘಾತಗಳ ಹಿಡಿತದಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆಗಳೂ ಇವೆ. ಇಂತಹದೊಂದು ಪವಾಡ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಮಕ್ಕಳಿದ್ದ ಲಿಫ್ಟ್ ಏಕಾಏಕಿ ಕುಸಿದು ಬಿದ್ದ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯ ಬವಾದನ್ ಕಿ ಸಾಯಿ ವೆಲಾಸಿಟಿ ಸೊಸೈಟಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಅಲ್ಲಿ ವಾಸಿಸುವ ಇಬ್ಬರು ಮಕ್ಕಳು ಲಿಫ್ಟ್ ಹತ್ತಿ, ವಾಪಸಾದ ಬಳಿಕ ಇದ್ದಕ್ಕಿದ್ದಂತೆ ಹತ್ತನೇ ಮಹಡಿಯಿಂದ ಲಿಫ್ಟ್ ಭಾರೀ ಶಬ್ದದಿಂದ ಕುಸಿದಿದೆ. ಆದರೆ ಅದಾಗಲೇ ಮಕ್ಕಳಿಬ್ಬರೂ ಹೊರಗೆ ಹೋಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಇಬ್ಬರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಇಲ್ಲದಿದ್ದರೆ ಅನಿರೀಕ್ಷಿತ ಅನಾಹುತ ಸಂಭವಿಸುತ್ತಿತ್ತು. ಮಕ್ಕಳು ಹೊರಗೆ ಹೋದ ತಕ್ಷಣ ಲಿಫ್ಟ್ ತಂತಿ ತುಂಡಾಗಿ ಅವಘಡ ಸಂಭವಿಸಿರುವುದು ಕಂಡು ಬಂದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಿಫ್ಟ್ ಕೆಳಗೆ ಬಿದ್ದಿದ್ದರಿಂದ ಸೊಸೈಟಿಯ ನಿವಾಸಿಗಳು ಭಯದಿಂದ ತತ್ತರಿಸಿದ್ದಾರೆ. ಬಿಲ್ಡರ್ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಾಗಿತ್ತು. ಅವರ ದೂರಿನ ಆಧಾರದ ಮೇಲೆ ಪೊಲೀಸರು ಲಿಫ್ಟ್ ಬಿಲ್ಡರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.