ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸೋಮೇಶ್ವರ ಉಚ್ಚಿಲದ ಬೀಚ್ ರೆಸಾರ್ಟ್ ನ ಈಜುಕೊಳದಲ್ಲಿ ನೀರಾಟವಾಡುತ್ತಿದ್ದ ಮೈಸೂರು ಮೂಲದ ಮೂವರು ಯುವತಿಯರು ಉಸಿರುಗಟ್ಟಿ ಸಾವನ್ನಪ್ಪಿದ್ದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೈಸೂರು ಕುರುಬಾರ ಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21 ), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲ ನಿವಾಸಿ ಪಾರ್ವತಿ ಎಸ್ (20), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21) ಸಾವನ್ನಪ್ಪಿದ್ದ ಯುವತಿಯರು.
ಮೂವರು ಯುವತಿಯರು ಮೈಸೂರು ಜೆಎಸ್ ಎಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ಸಾಲಿನ ವಿದ್ಯಾರ್ಥಿನಿಯರು.
ನಿನ್ನೆ ಬೆಳಿಗ್ಗೆ ರೆಸಾರ್ಟ್ ಗೆ ಬಂದಿದ್ದ ಮೂವರು ಯುವತಿಯರು ರೂಮ್ ನಂ 2ರಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ರೆಸಾರ್ಟ್ ಮುಂಭಾಗದಲ್ಲಿನ ಈಜುಕೊಳಕ್ಕಿಳಿದು ನೀರಾಟವಾಡುತ್ತಿದ್ದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ.
ಯುವತಿಯರು ಈಜುಕೊಳದ ದಂಡೆಯಲ್ಲಿ ಮೊಬೈಲ್, ಹೊರ ಉಡುಪುಗಳನ್ನ ಕಳಚಿಟ್ಟಿದ್ದು ಐ ಪೋನ್ ಒಂದನ್ನ ಈಜು ಕೊಳದ ನೀರಿಗೆ ಗುರಿಯಾಗಿ ಸೆಲ್ಫಿ ರೆಕಾರ್ಡ್ ಇಟ್ಟು ನೀರಾಟಕ್ಕಿಳಿದಿದ್ದಾರೆ. ಈಜು ಕೊಳದ ಒಂದು ಭಾಗ ಆಳವಾಗಿದ್ದು ಓರ್ವ ಯುವತಿ ಮುಳುಗುತ್ತಿದ್ದು, ಆಕೆಯನ್ನ ರಕ್ಷಿಸಲು ತೆರಳಿದ ಮತ್ತಿಬ್ಬರು ಯುವತಿಯರೂ ಮುಳುಗಿ ಸಾವನ್ನಪ್ಪಿದ್ದಾರೆ.
ಮೂವರು ಯುವತಿಯರಿಗೆ ಈಜು ತಿಳಿಯದೆ ಇರುವುದರಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ. ರೆಸಾರ್ಟ್ ಸಿಬ್ಬಂದಿಗಳು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಯುವತಿಯರು ನೀರಲ್ಲಿ ಮುಳುಗುತ್ತಿರುವ ಘಟನೆಯ ವೀಡಿಯೋ ಚಿತ್ರಣ ರೆಸಾರ್ಟ್ನ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೆಸಾರ್ಟ್ ನವರು ಈಜುಕೊಳಕ್ಕೆ ಜೀವರಕ್ಷಕ ಸಿಬ್ಬಂದಿಯಾಗಲಿ ಇನ್ನಿತರ ಯಾವುದೇ ಸುರಕ್ಷತಾ ಕ್ರಮವನ್ನ ಅಳವಡಿಸದ ಕಾರಣ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಮೃತರ ಮನೆಯವರಿಗೆ ವಿಷಯ ತಿಳಿಸಿದ್ದು ಅವರು ಮಂಗಳೂರಿಗೆ ಬರುತ್ತಿರುವುದಾಗಿ ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಮೃತದೇಹಗಳನ್ನ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.