ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕ ಮೂಲದ ಯುವಕನೊಬ್ಬ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದ ನಿವಾಸಿ ಚಂದನ್ ಕುಮಾರ್ (37) ಅವರನ್ನು ಕೆನಡಾದಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದರೆಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:
ಎಲ್‌ಎನ್‌ಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಚಂದನ್ ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದರು. ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅವರ ಮೇಲೆ ಹಲವು ಸುತ್ತು ಗುಂಡಿನ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ದುರಂತದ ಬಗ್ಗೆ ಟೊರೊಂಟೊ ಪೊಲೀಸರು ದೂರವಾಣಿ ಮೂಲಕ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಮೃತರ ತಂದೆ, ನಿವೃತ್ತ ಶಿಕ್ಷಕರಾದ ನಂದಕುಮಾರ್ ಮಾತನಾಡಿ, ಕೆಲ ದಿನಗಳ ಹಿಂದಷ್ಟೇ ಮಗನ ಜೊತೆ ಮಾತುಕತೆ ನಡೆಸಿದ್ದೆವು. ರಜೆ ತೆಗೆದುಕೊಂಡು ಭಾರತಕ್ಕೆ ಬಂದು ಮದುವೆ ಮಾಡಿಕೊಳ್ಳುವ ಯೋಜನೆ ಇತ್ತು ಎಂದು ಭಾವುಕರಾದರು. ಈಗ ಮಗನ ಮೃತದೇಹವನ್ನು ಸ್ವದೇಶಕ್ಕೆ ತರಲು ಸರ್ಕಾರ ಸಹಾಯ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಘಟನೆಯ ಕುರಿತು ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.



